ಅಮೆರಿಕದ ಗ್ರೀನ್ ಕಾರ್ಡ್ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸರ್ಕಾರ ಯುಎಸ್ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆಗಳನ್ನ ನಡೆಸಿದೆ. ಈ ಹೊಸ ಕಾನೂನಿನಿಂದಾಗಿ ಅಮೆರಿಕದಲ್ಲಿರುವ ಐಟಿ ವೃತ್ತಿಪರರು ಹಾಗೂ ಇತರೆ ಕೆಲಸಗಾರರಿಗೆ ಅಲ್ಲಿನ ಪೌರತ್ವ ಸಿಗಲಿದೆ. ಗುರುವಾರ ಅಮೆರಿಕ ಕಾಂಗ್ರೆಸ್ನಲ್ಲಿ ಯುಎಸ್ ಪೌರತ್ವ ಕಾಯ್ದೆ 2021ನ್ನು ಪರಿಚಯಿಸಲಾಗುವುದು ಎಂದು ವರದಿಯಾಗಿದೆ.
ಅಮೆರಿಕದ ಪೌರತ್ವವನ್ನ ಪಡೆಯುವುದಕ್ಕಾಗಿ ಸಾಕಷ್ಟು ವೃತ್ತಿಪರರು ದಶಕಗಳಿಂದ ತುದಿಗಾಲಲ್ಲಿ ನಿಂತಿದ್ದಾರೆ. ಅನಿವಾಸಿಗಳ ಈ ಕಾಯುವಿಕೆಗೆ ಬಿಡೆನ್ ಸರ್ಕಾರ ಅಂತ್ಯ ಹಾಡಲು ಹೊರಟಿದೆ. 11 ಮಿಲಿಯನ್ ದಾಖಲೆ ರಹಿತ ವಲಸಿಗರಿಗೆ ಈ ಕಾಯ್ದೆಯಿಂದ ಲಾಭವಾಗಲಿದೆ. ಈ ಕಾನೂನನ್ನ ಜಾರಿಗೆ ತರುವ ಮುನ್ನ ಅದನ್ನ ಅಮೆರಿಕ ಕಾಂಗ್ರೆಸ್ನಲ್ಲಿ ಅಂಗೀಕರಿಸಬೇಕಾಗುತ್ತೆ.
ಹೊಸ ಮಸೂದೆ ಜಾರಿಗೆ ಬಂದ ಬಳಿಕ ಹೆಚ್ 1 ಬಿ ವೀಸಾ ಹೊಂದಿರುವವರಿಗೆ ಉದ್ಯೋಗದ ದೃಢೀಕರಣ ಸಿಕ್ಕಂತಾಗುತ್ತದೆ. ಈ ಮಸೂದೆಯಿಂದ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗೂ ಲಾಭವಾಗಲಿದೆ. ಏಕೆಂದರೆ ಈ ಕಾರ್ಡ್ಗಳನ್ನ ಪಡೆಯುವವರಿಗೆ ಶಾಶ್ವತ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಸ್ಥಾನ ಸಿಗುತ್ತದೆ.