ಕೊರೊನಾ ಸಾಂಕ್ರಾಮಿಕ ಕೇವಲ ಮನುಷ್ಯನಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಬರುತ್ತದೆ ಎಂಬ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ 2 ಗೊರಿಲ್ಲಾಗಳು ಕೊರೊನಾ ಸೋಂಕಿಗೀಡಾಗಿವೆ.
ಎರಡು ಗೊರಿಲ್ಲಾಗಳಿಗೆ ಕಳೆದ ವಾರ ಕೆಮ್ಮು ಶುರುವಾಗಿತ್ತು. ಬಳಿಕ ಇವುಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇದೀಗ ಮೂರನೇ ಗೊರಿಲ್ಲಾ ಕೂಡ ಕೊರೊನಾ ಲಕ್ಷಣಗಳನ್ನ ತೋರಿಸುತ್ತಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.
ರೋಗಲಕ್ಷಣ ಹೊಂದಿರದ ಸೋಂಕಿಗೆ ಒಳಗಾಗಿದ್ದ ಮೃಗಾಲಯದ ಕೆಲಸಗಾರರಿಂದ ಈ ವೈರಸ್ ಗೊರಿಲ್ಲಾಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಕೆಮ್ಮಿನ ಹೊರತಾಗಿ ಗೊರಿಲ್ಲಾದ ಆರೋಗ್ಯ ಸ್ಥಿರವಾಗಿದೆ ಎಂದು ವಿಶ್ವ ಪ್ರಸಿದ್ಧ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಲಿಸಾ ಪೀಟರ್ಸನ್ ಮಾಹಿತಿ ನೀಡಿದ್ದಾರೆ. ಗೊರಿಲ್ಲಾದ ಡಿಎನ್ಎಗಳು 98 ಪ್ರತಿಶತದಷ್ಟು ಮಾನವನಿಗೆ ಹೋಲಿಕೆ ಹೊಂದಿರುತ್ತವೆ. ಮಾನವನ ಜಾತಿಗೆ ಸೇರಿದ ಈ ಸಸ್ತನಿಗಳು ಕೊರೊನಾ ಸೊಂಕಿಗೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಮನುಷ್ಯರಂತೆಯೇ ಗೊರಿಲ್ಲಾದ ಮೇಲೂ ಕೊರೊನಾ ಗಂಭೀರ ಪರಿಣಾಮ ಬೀರುತ್ತದೆಯೇ ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.