ಅಮೆರಿಕ ಡೆಲ್ವೇರ್ ರಾಜ್ಯದಷ್ಟು ವಿಸ್ತಾರವಿರುವ ಬೃಹತ್ ಮಂಜುಗಡ್ಡೆಯೊಂದು ದಕ್ಷಿಣ ಜಾರ್ಜಿಯಾದ ಉಪ-ಅಂಟಾರ್ಕ್ಟಿಕ್ ದ್ವೀಪದ ಬಳಿ ತೇಲಿ ಬರುತ್ತಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ವನ್ಯಸಂಪತ್ತಿಗೆ ಹಾನಿಯಾಗುವ ಭೀತಿ ಮೂಡಿದೆ.
ಈ ಬೃಹತ್ ಮಂಜುಗಡ್ಡೆ ದ್ವೀಪದ ಬಳಿ ಬಂದು ನಿಂತಲ್ಲಿ, ನೆಲದ ಮೇಲೆ ವಾಸ ಮಾಡಿಕೊಂಡು ಸಮುದ್ರಕ್ಕೆ ಹೋಗಿ ಆಹಾರ ಹುಡುಕಿ ಬರುವ ಜೀವಿಗಳಿಗೆ ಭಾರೀ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಅಂಟಾರ್ಕ್ಟಿಕ್ ಸರ್ವೇ ಆತಂಕ ವ್ಯಕ್ತಪಡಿಸಿದೆ.
ವರ್ಷದ ಈ ಅವಧಿಯಲ್ಲಿ ಪೆಂಗ್ವಿನ್‌ಗಳು ಹಾಗೂ ಸೀಲ್‌ಗಳು ಮರಿಗಳನ್ನು ಹಾಕಿ, ಅವುಗಳನ್ನು ಪೋಷಿಸುವ ಕಾಲವಾಗಿದ್ದು, ಆಹಾರ ಅರಸಿ ಸಾಕಷ್ಟು ದೂರ ಕ್ರಮಿಸಬೇಕಾಗುವ ಕಾರಣ ಈ ಮಂಜುಗಡ್ಡೆಯಿಂದ ಭಾರೀ ಅನಾಹುತಗಳಾಗುವ ಭೀತಿಯನ್ನು ಪರಿಸರ ತಜ್ಞ ಪ್ರೊಫೆಸರ್ ಗೆರಾಂಟ್ ಟಾರ್ಲಿಂಗ್ ವ್ಯಕ್ತಪಡಿಸಿದ್ದಾರೆ.