ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್ನ್ನು ಕಳೆದುಕೊಂಡಿರಿ ಅಂದರೆ ಕತೆ ಮುಗೀತು ಅಂತಾನೇ ಅರ್ಥ. ಅದು ಪುನಃ ನಿಮ್ಮ ಕೈಗೆ ಸಿಗೋ ಮಾತೇ ಇಲ್ಲ. ಆದರೆ ಊಬರ್ ಚಾಲಕನೊಬ್ಬ 8 ತಿಂಗಳ ಹಿಂದೆ ಗ್ರಾಹಕಿ ತನ್ನ ಕಾರಿನಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ನ್ನು ಸುರಕ್ಷಿತವಾಗಿ ಹಿಂದಿರುಗಿಸಿದ್ದಾನೆ.
ಲಂಡನ್ ನಿವಾಸಿಯಾಗಿರುವ ಶೇ ಸೇಡ್ ಎಂಬವರು ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ನಂಬಿಕೆ ಮತ್ತು ಮಾನವೀಯತೆ ಜಗತ್ತಿನಲ್ಲಿ ಇನ್ನೂ ಇದೆ ಎಂದು ಶೀರ್ಷಿಕೆ ನೀಡಿದ್ದಾರೆ. ಆದರೆ ಈ ಮೊಬೈಲ್ನ್ನು ಹಿಂದಿರುಗಿಸಲು 8 ತಿಂಗಳ ಸಮಯ ಏಕೆ ಬೇಕಾಯ್ತು ಎಂಬ ಪ್ರಶ್ನೆ ನಿಮ್ಮನ್ನ ಕಾಡುತ್ತಿರಬಹುದು.
ಈಕೆ ಏಪ್ರಿಲ್ 30ರಂದು ಅಂದರೆ ಮೊಬೈಲ್ ಕಳೆದುಹೋದ 8 ತಿಂಗಳ ಬಳಿಕ ಅದೇ ಕ್ಯಾಬ್ನ್ನು ಪುನಃ ಬುಕ್ ಮಾಡಿದ್ದ ವೇಳೆ ಆ ಚಾಲಕ ಫೋನ್ನ್ನು ಹಿಂದಿರುಗಿಸಿದ್ದಾನೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಈ ಮೊಬೈಲ್ ಚಾಲಕನ ಬಳಿಯೇ ಇದ್ದಿತ್ತು. ಆದರೆ ಈ ಮಹಿಳೆಯನ್ನ ಹುಡುಕುವ ಯಾವುದೇ ಮಾರ್ಗ ಚಾಲಕನಿಗೆ ತಿಳಿದಿರಲಿಲ್ಲ. ಹೀಗಾಗಿ ಆಕೆ ಮತ್ತೊಮ್ಮೆ ಸಿಗುವವರೆಗೂ ಕಾಯೋಣ ಎಂದು ಚಾಲಕ ಆ ಮೊಬೈಲ್ನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ.
ನನಗೆ ಜನರು ತುಂಬಾ ಒಳ್ಳೆಯವರು ಎಂದು ಎನಿಸಲು ಶುರುವಾಗಿದೆ. ಇಂತಹ ಒಳ್ಳೆಯ ಗುಣವುಳ್ಳ ಅಪರಿಚಿತನನ್ನ ನಾನು ನೋಡ್ತಿರೋದು ಇದೇ ಮೊದಲು. ಈತ ನಿಜಕ್ಕೂ ಒಳ್ಳೆಯ ಮನುಷ್ಯ ಎಂದು ಅವರು ಹೇಳಿದ್ರು.