ವ್ಯಾಲೆಂಟೈನ್ಸ್ ಡೇ ಸಮೀಪಿಸ್ತಾ ಇದೆ. ಪ್ರೇಮಿಗಳ ಖುಷಿಗಂತೂ ಪಾರವೇ ಇಲ್ಲ ಎಂಬಂತಾಗಿದೆ. ಆದರೆ ಲವ್ ಬ್ರೇಕಪ್ ಆದೋರು ಏನು ಮಾಡಬೇಕು..? ಪ್ರೇಮದಿಂದ ಮೋಸ ಹೋದವರಿಗೆ ಈ ದಿನದಂದು ಬಹುಶಃ ತಮ್ಮ ಹಳೆ ಪ್ರೇಮಿಯನ್ನ ನೆನೆಸಿಕೊಂಡು ತುಂಬಾನೇ ಕೋಪ ಬರಬಹುದು. ಹೀಗಾಗಿ ನಿಮ್ಮ ಈ ಸಿಟ್ಟನ್ನ ಸಂಭ್ರಮಿಸೋಕು ಇಲ್ಲೊಂದು ಕಡೆ ಅವಕಾಶ ನೀಡಲಾಗಿದೆ.
ವ್ಯಾಲೆಂಟೈನ್ಸ್ ಡೇ ದಿನವನ್ನ ಕೇವಲ ಪ್ರೇಮಿಗಳು ಮಾತ್ರ ಏಕೆ ಸಂಭ್ರಮಿಸಬೇಕು..? ಲವ್ ಬ್ರೇಕಪ್ ಆದವರೂ ಸಹ ಸಂಭ್ರಮಿಸಲಿ ಎಂಬ ಕಾರಣಕ್ಕೆ ಕೆಂಟುಕಿಯಲ್ಲಿರುವ ಸಮುದಾಯವೊಂದು ಹೊಸ ಪ್ಲಾನ್ ಒಂದನ್ನ ಮಾಡಿದೆ. ಹೆಚ್ಚೇನಲ್ಲ. ನಿಮ್ಮ ಪ್ರೀತಿಯನ್ನ ಧಿಕ್ಕರಿಸಿ ಹೋದವರ ಹೆಸರಿನ ಮೇಲೆ ಬೆಕ್ಕೊಂದು ಮಲ ವಿಸರ್ಜನೆ ಮಾಡಲಿದೆ..!
ಇದಕ್ಕಾಗಿ ನೀವು 727.88 ರೂಪಾಯಿ ಪಾವತಿ ಮಾಡಿದರೆ ಸಾಕು. ನಿಮ್ಮ ಎಕ್ಸ್ನ ಹೆಸರನ್ನ ಟ್ರೇಯೊಂದರ ಮೇಲೆ ಬರೆಯಲಾಗುತ್ತೆ. ಹಾಗೂ ಅದರ ಮೇಲೆ ಬೆಕ್ಕುಗಳು ಮಲವಿಸರ್ಜನೆ ಮಾಡಲಿವೆ. ನಿಮ್ಮ ಪ್ರೀತಿಗೆ, ನಂಬಿಕೆಗೆ ಮೋಸ ಮಾಡಿದವರ ಮೇಲೆ ದ್ವೇಷ ತೀರಿಸಿಕೊಂಡ ತೃಪ್ತಿ ನಿಮ್ಮದಾಗಲಿದೆ.