ದೊಡ್ಡ ಮನೆಯನ್ನ ಖರೀದಿ ಮಾಡಬೇಕೆಂದು ತಮ್ಮ ಪ್ರಸ್ತುತ ಮನೆಯನ್ನ ಮಾರಾಟ ಮಾಡೋಕೆ ನಿರ್ಧರಿಸಿದ್ದ ಬರ್ಮಿಂಗ್ ಹ್ಯಾಮ್ ತಮ್ಮ ಪ್ರಸ್ತುತ ಮನೆಯ ದರವನ್ನ ಕೇಳಿ ಶಾಕ್ ಆಗಿದ್ದಾರೆ.
ಮ್ಯಾಟ್ ಬ್ರೌನ್ ಹಾಗೂ ಲಿಜ್ಜಿ ಬರ್ನೆಟ್ ದಂಪತಿ ಪ್ರಸ್ತುತ ವಾಸವಿರುವ ಅಪಾರ್ಟ್ಮೆಂಟ್ಗೆ ಗ್ರೆನ್ಫೆಲ್ ಶೈಲಿ ಕ್ಲಾಡಿಂಗ್ ಮಾಡಿರೋದ್ರಿಂದ ಈ ಅಪಾರ್ಟ್ಮೆಂಟ್ ಶೂನ್ಯ ಮೌಲ್ಯದ್ದಾಗಿದೆ ಎಂದು ದಂಪತಿಗೆ ತಿಳಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡುವ ಮೊದಲು ಕ್ಲಾಡಿಂಗ್ ಹಾಗೂ ಗ್ರೆನ್ಫೆಲ್ ಕ್ಲಾಡಿಂಗ್ ಎಂದರೇನು ಎಂದು ತಿಳಿದುಕೊಳ್ಳೋಣ.
ಕ್ಲಾಡಿಂಗ್ ಎಂದರೆ ಒಂದು ವಸ್ತುವಿನ ಮೇಲೆ ಇನ್ನೊಂದು ಪದರವನ್ನು ಜೋಡಿಸೋದು. ಕಟ್ಟಡವನ್ನ ನಿರ್ಮಾಣ ಮಾಡುವಾಗ ಅದರ ನೋಟವನ್ನ ಸುಧಾರಿಸಲು ಹಾಗೂ ಉಷ್ಣ ನಿರೋಧಕ ಸ್ಥಿತಿ ಉಂಟು ಮಾಡಲು ಸಾಮಾನ್ಯವಾಗಿ ಕಟ್ಟಡದ ಸುತ್ತಲೂ ಕ್ಲಾಡಿಂಗ್ ಮಾಡಲಾಗುತ್ತೆ.
2017ರಲ್ಲಿ ಕೆನ್ಸಿಂಗ್ಟನ್ ಗ್ರೆನ್ಫೆಲ್ ಟವರ್ ಅಗ್ನಿ ಆಹುತಿಗೆ ಒಳಗಾದ ಬಳಿಕ ಬ್ರಿಟನ್ನಾದ್ಯಂತ ಹಲವು ಕಟ್ಟಡಗಳಿಗೆ ಅಳವಡಿಸಲಾಗಿದ್ದ ಕ್ಲಾಡಿಂಗ್ ಹೊದಿಕೆಯನ್ನ ಕಿತ್ತು ಹಾಕಲಾಗಿತ್ತು. ಬೆಂಕಿ ಅವಘಡಕ್ಕೆ ಕ್ಲಾಡಿಂಗ್ ಹೊದಿಕೆ ಕಾರಣ ಎಂಬ ಆರೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿತ್ತು.
ತಜ್ಞರು ಹೇಳುವ ಪ್ರಕಾರ, ಕ್ಲಾಡಿಂಗ್ ಪ್ಯಾನೆಲ್ಗಳಿಂದ ಬೆಂಕಿ ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಅದರಲ್ಲೂ ಕಡಿಮೆ ಮೌಲ್ಯದ ವಸ್ತುವಿನ ಕ್ಲಾಡಿಂಗ್ ಅಳವಡಿಸಿದ್ರೆ ಈ ಸಾಧ್ಯತೆ ದುಪ್ಪಟ್ಟು ಎನ್ನಲಾಗಿದೆ. 2017ರಲ್ಲಿ ನಡೆದ ದುರಂತದಲ್ಲಿ 72 ಮಂದಿ ಸಾವನ್ನಪ್ಪಿದ್ದರು.
ಹೀಗಾಗಿ ಬರ್ಮಿಂಗ್ ಹ್ಯಾಮ್ ದಂಪತಿಗೆ ಮನೆ ಮಾರಾಟ ಮಾಡೋದು ಸಂಕಷ್ಟವಾಗಿ ಪರಿಣಮಿಸಿದೆ. ಕಟ್ಟಡ ದುರಸ್ಥಿ ಕಾರ್ಯ ಮಾಡೋದ್ರಲ್ಲೇ ನಾವು ದಿವಾಳಿಯಾಗುತ್ತೇವೆ ಅಂತಾ ದಂಪತಿ ಕಣ್ಣೀರು ಹಾಕ್ತಿದ್ದಾರೆ.