
ಈ ಕೊರೊನಾ ಕಾಲದಲ್ಲಿ ಏನೆಲ್ಲ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ.
ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ ನಡೆದಿದ್ದು, ಮದುವೆ ಮಂಟಪದಲ್ಲಿ ವಧೂವರರಿದ್ದರೆ ಅತಿಥಿಗಳೆಲ್ಲ ಮಂಟಪದ ಹೊರಗಿನ ಬಯಲಿನಲ್ಲಿ ಕಾರಿನಲ್ಲೇ ಇದ್ದು ವಿವಾಹ ವೀಕ್ಷಿಸಿ ನವಜೋಡಿಗೆ ಶುಭ ಹಾರೈಸಿದರು.
ವಿವಾಹ ಸಮಾರಂಭ ಕುಟುಂಬ ಸದಸ್ಯರು, ಸ್ನೇಹಿತರ ಸಮಾಗಮದ ವಿಶೇಷ ಸಂದರ್ಭ. ಆದರೆ ಕೋವಿಡ್ ಕಾರಣಕ್ಕೆ ಹೆಚ್ಚು ಜನ ಸೇರುವಂತಿಲ್ಲ. ಇಂಗ್ಲೆಂಡ್‌ನಲ್ಲಿ 15ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸುವಂತಿಲ್ಲ ಎಂಬ ನಿಯಮವಿದೆ.
ಆದಾಗ್ಯೂ, ಕಾಲ್ಚೆಸ್ಟರ್‌ನಲ್ಲಿ ನಡೆದ ರೋಮಾ ಪೊಪಾಟ್ ಮತ್ತು ವಿನಾಲ್ ಪಟೇಲ್ ವಿವಾಹದಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅತಿಥಿಗಳು ಪಾರ್ಕಿಂಗ್ ಲಾಟ್ ನಲ್ಲಿ ಕಾರೊಳಗೆ ಇದ್ದರು. ಅವರು ವಿವಾಹ ವೀಕ್ಷಣೆಗೆ ದೊಡ್ಡ ಪರದೆ ಅಳವಡಿಸಲಾಗಿತ್ತು.
ವಿವಾಹದ ಬಳಿಕ ಅತಿಥಿಗಳಿಗೆ ಕಾರಿನಲ್ಲೇ ಊಟೋಪಚಾರ, ಸತ್ಕಾರ ನೀಡಲಾಯಿತು.