ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವ ಜನರೂ ಸಹ ಅನಿಯಮಿತ ಹೃದಯಬಡಿತದ ಸಮಸ್ಯೆಯನ್ನ ಎದುರಿಸುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಯುರೋಪಿನ್ ಹಾರ್ಟ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಮದ್ಯಪಾನವನ್ನೇ ಮಾಡದ ವ್ಯಕ್ತಿಗೆ ಹೋಲಿಸಿದ್ರೆ ದಿನಕ್ಕೆ ಒಂದು ಬಾರಿ ಮದ್ಯಪಾನ ಸೇವನೆ ಮಾಡುವ ವ್ಯಕ್ತಿಯಲ್ಲಿ ಈ ಸಮಸ್ಯೆ ಶೇಕಡಾ 16ರಷ್ಟು ಹೆಚ್ಚಿರುತ್ತೆ ಎಂದು ಉಲ್ಲೇಖಿಸಲಾಗಿದೆ.
ಸುಮಾರು 1,07,845 ಜನರನ್ನೊಳಗೊಂಡ ಅಧ್ಯಯನದಲ್ಲಿ ಅವರ ವೈದ್ಯಕೀಯ ಇತಿಹಾಸ, ಜೀವನಶೈಲಿ, ಉದ್ಯೋಗ ಹಾಗೂ ಶಿಕ್ಷಣ ಮಟ್ಟ ಇವೆಲ್ಲವನ್ನ ಸಂಗ್ರಹಿಸಲಾಗಿತ್ತು. ಸುಮಾರು 14 ವರ್ಷಗಳ ಅಧ್ಯಯನದಲ್ಲಿ ಮೊದಲು ಹೃತ್ಕರ್ಣ ಕಂಪನದ ಸಮಸ್ಯೆ ಹೊಂದಿರದ ಈ ಎಲ್ಲಾ ಜನರಲ್ಲಿ 5854 ಮಂದಿ ಅನಿಯಮಿತ ಹೃದಯ ಕಂಪನವನ್ನ ಹೊಂದಿರೋದು ಕಂಡು ಬಂತು. ಹಾಗೂ ಇವರೆಲ್ಲ ದಿನಕ್ಕೆ ಒಂದು ಬಾರಿ ಮದ್ಯ ಸೇವನೆ ಮಾಡುವವರಾಗಿದ್ದರು.
ಇದು ವನ್ ಪೆಗ್ ಸೇವನೆ ಮಾಡುವವರ ಕತೆಯಾದ್ರೆ ದಿನಕ್ಕೆ 2 ಪೆಗ್ ಸೇವನೆ ಮಾಡುವವರಿಗೆ ಈ ಅಪಾಯ 28 ಪ್ರತಿಶತದಷ್ಟು ಅಧಿಕ ಇದೆ. ಇದೇ ರೀತಿ ದಿನಕ್ಕೆ ಮೂರು ನಾಲ್ಕು ಪೆಗ್ ಸೇವನೆ ಮಾಡುವವರಿಗೆ 48 ಪ್ರತಿಶತದವರೆಗೂ ಹೃತ್ಕರ್ಣ ಕಂಪನದ ಸಮಸ್ಯೆ ಅಧಿಕವಾಗುತ್ತಲೇ ಹೋಗುತ್ತದೆ ಎಂದು ಅಧ್ಯಯನ ಹೇಳಿದೆ.