ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್ಬುಕ್ ಕೋವಿಡ್ 19 ಸಂಬಂಧಿಸಿದ ವಿಷಯಗಳ ಮೇಲೆ ಹೇರಿದ್ದ ನಿರ್ಬಂಧವನ್ನ ತೆಗೆದುಹಾಕಿದೆ.
ಈ ನಿರ್ಬಂಧ ತೆರವುಗೊಳಿಸಿದ ಬಳಿಕ ಕೋವಿಡ್, ಲ್ಯಾಬ್ನಲ್ಲಿ ನಿರ್ಮಾಣವಾಗಿದ್ದು ಎಂಬ ಮಾತಿಗೆ ಪುಷ್ಠಿ ನೀಡುವಂತಹ ಪೋಸ್ಟ್ಗಳ ವರದಿಗೆ ಅವಕಾಶ ನೀಡಿದೆ.
ಕೋವಿಡ್ 19 ಮೂಲದ ವಿಚಾರವಾಗಿ ನಡೆಯುತ್ತಿರುವ ತನಿಖೆ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೋವಿಡ್ 19 ಮಾನವ ನಿರ್ಮಿತ ವೈರಸ್ ಎಂಬ ವಾದಕ್ಕೆ ಸಂಬಂಧಿಸಿದ ಪೋಸ್ಟ್ಗಳನ್ನ ಫೇಸ್ಬುಕ್ನಿಂದ ತೆಗೆದು ಹಾಕೋದಿಲ್ಲ ಎಂದು ಕಂಪನಿ ಹೇಳಿದೆ.
ಅಲ್ಲದೇ ಕೋವಿಡ್ 19 ವಿಚಾರವಾಗಿ ನಾವು ನಿರಂತರವಾಗಿ ಆರೋಗ್ಯ ತಜ್ಞರ ಸಂಪರ್ಕದಲ್ಲಿ ಇರುತ್ತೇವೆ. ಕೋವಿಡ್ 19 ಬಗ್ಗೆ ಹೊಸ ಹೊಸ ಮಾಹಿತಿಗಳು ತಿಳಿಯುತ್ತಿದ್ದಂತೆಯೇ ಫೇಸ್ಬುಕ್ನ ಷರತ್ತು ಹಾಗೂ ನಿಯಮಗಳು ಬದಲಾಗಲಿವೆ ಎಂದೂ ಹೇಳಿದೆ.
ಡಿಸೆಂಬರ್ ತಿಂಗಳಲ್ಲಿ ಫೇಸ್ಬುಕ್ ಕೊರೊನಾ ವೈರಸ್ ಲಸಿಕೆಗಳ ಕುರಿತಾದ ಸುಳ್ಳು ಮಾಹಿತಿಯನ್ನ ಹೊಂದಿರುವ ಪೋಸ್ಟ್ಗಳಿಗೆ ಲಗಾಮು ಹಾಕಿತ್ತು.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್ 19 ವೈರಸ್ ಪ್ರಾಣಿ ಮೂಲದಿಂದ ಬಂದಿದ್ದೋ ಅಥವಾ ಲ್ಯಾಬ್ನಿಂದ ಬಂದಿದ್ದೋ ಎಂಬುದನ್ನ ಪತ್ತೆ ಮಾಡುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದಾರೆ.