ಟರ್ಕಿ: ಕರೋನಾ ಲಾಕ್ಡೌನ್ನಿಂದಾಗಿ ಪರಿಸರ ಶುದ್ಧವಾಗುತ್ತಿದೆ. ಟರ್ಕಿಯ ಇಜ್ನಿಕ್ ಸರೋವರದ ನೀರು ಅತ್ಯಂತ ಶುದ್ಧವಾಗಿ ಪಾರದರ್ಶಕವಾಗಿದೆ. ಇದರಿಂದ 1600 ವರ್ಷಗಳ ಹಳೆಯ ಚರ್ಚ್ ಒಂದರ ಅವಶೇಷಗಳು ಇದೇ ಮೊದಲ ಬಾರಿಗೆ ಕಾಣಿಸಿವೆ.
ಡ್ರೋಣ್ ಮೂಲಕ ತೆಗೆಯಲಾದ ಚಿತ್ರದಲ್ಲಿ ಸರೋವರದ ಒಳಗೆ ರೋಮ್ ಶೈಲಿಯ ಚರ್ಚ್ ಗೋಡೆಗಳಿರುವ ಮಾದರಿ ಸ್ಪಷ್ಟವಾಗಿದೆ. 2014 ರಲ್ಲಿ ಸರೋವರದ ಒಳಗೆ ಚರ್ಚ್ ನ ಅವಶೇಷಗಳನ್ನು ಮೊಟ್ಟ ಮೊದಲು ಗುರುತಿಸಲಾಗಿತ್ತು. ಅಮೇರಿಕಾದ ಪುರಾತತ್ವ ಸಂಸ್ಥೆ ನಡೆಸಿದ ಆ ವರ್ಷದ ಟಾಪ್ 10 ಸಂಶೋಧನೆಗಳಲ್ಲಿ ಇದೂ ಒಂದು ಸೇರಿತ್ತು.
ಇಸ್ತಾಂಬುಲ್ ನ್ನು ಕಾನ್ಸ್ಟೆಂಟಿನೋಪ್ ಎಂದು ಕರೆಯುತ್ತಿದ್ದ ಅವಧಿಯಲ್ಲಿ ಎಂದರೆ, ಕ್ರಿಸ್ತ ಶಕ 390 ರಲ್ಲಿ ಬಾಸಿಲಿಕಾ ಎಂಬ ಹೆಸರಿನ ಈ ಚರ್ಚ್ ನಿರ್ಮಿಸಲಾಯಿತು. ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಾರೆ. ಕ್ರಿಸ್ತಶಕ 740 ಯಲ್ಲಿ ಭೂಕಂಪದಿಂದ ಚರ್ಚ್ ಧ್ವಂಸವಾಯಿತು. ಮತ್ತು ಸರೋವರದ ಒಳಗಡೆ ಮುಳುಗಡೆಯಾಯಿತು.
ಸರೋವರ ತೀರದ 160 ಅಡಿ ಒಳಗೆ ನೀರಿನ ಮೇಲ್ಮೈಯ್ಯಿಂದ ಸುಮಾರು 10 ಅಡಿ ಕೆಳಗೆ ಚರ್ಚ್ ಅವಶೇಷಗಳಿವೆ. “ನಾನು 2006 ರಿಂದ ಇಜ್ನಿಕ್ ಸರೋವರದ ಸಮೀಕ್ಷೆ ನಡೆಸುತ್ತಿದ್ದೇನೆ. ಆದರೆ, ಇಷ್ಟು ಭವ್ಯವಾದ ಅವಶೇಷ ಇರುವುದನ್ನು ನಾನೆಂದೂ ನೋಡಿರಲೇ ಇಲ್ಲ. ಇದನ್ನು ನೋಡಿ ಅಚ್ಚರಿಯಾಗಿದೆ” ಎಂದು ಉಲುಡಾಗ್ ವಿಶ್ವ ವಿದ್ಯಾಲಯದ ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ.ಮುಸ್ತಫಾ ಸಾಹಿನ್ ಹೇಳಿದ್ದಾರೆ.
“ತುರ್ಕಿಯ ಮೊದಲ ನೀರಿನೊಳಗಿನ ಪುರಾತತ್ವ ವಸ್ತು ಸಂಗ್ರಹಾಲಯ ಎಂದು ಇದನ್ನು ಘೋಷಿಸಬೇಕು”ಎಂದು ಸ್ಥಳೀಯ ಆಡಳಿತದ ಮುಖಂಡ ಅಕ್ತಾಸ್ ಹಾಗೂ ಸಾಹಿನ್ ಒತ್ತಾಯಿಸಿದ್ದಾರೆ.