ಮತದಾರರ ಕೈಗೆ ಹಾಕಲಾಗಿದ್ದ ಸ್ಯಾನಿಟೈಸರ್ ಕಾರಣದಿಂದ ಬ್ಯಾಲೆಟ್ ಬಾಕ್ಸ್‌ಗಳು ಒದ್ದೆಯಾಗಿ ಕೆಟ್ಟು ನಿಂತ ಘಟನೆ ಅಮೆರಿಕ ಐಯೋವಾ ರಾಜ್ಯದಲ್ಲಿ ಜರುಗಿದೆ. ಇಂಥ ಘಟನೆಗಳ ಕಾರಣದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗೆ ಕೆಲ ಕಾಲ ಅಡಚಣೆಯುಂಟಾಗಿತ್ತು.
ಸ್ಯಾನಿಟೈಸರ್ ಅನ್ನು ಅತಿಯಾಗಿ ಹಚ್ಚಿಕೊಂಡು ಅದು ಆರುವ ಮುನ್ನವೇ ಬ್ಯಾಲೆಟ್ ಬಾಕ್ಸ್ ಅನ್ನು ಮುಟ್ಟಿದ ಮತದಾರರ ಕಾರಣದಿಂದ, ಐಯೋವಾದ ಡೆಸ್ ಮಾಯಿನ್ಸ್‌ನ ಮತಗಟ್ಟೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಒಂದು ಗಂಟೆಗಿಂತ ಹೆಚ್ಚಿನ ಅವಧಿಗೆ ಕೆಟ್ಟು ನಿಂತಿದ್ದವು ಎಂದು ವರದಿಯಾಗಿದೆ.
ಈ ಕಾರಣದಿಂದಾಗಿ, ಸ್ಯಾನಿಟೈಸರ್‌ಗಳನ್ನು ಬ್ಯಾಲೆಟ್ ಬಾಕ್ಸ್‌ಗಳಿಂದ ಇನ್ನಷ್ಟು ದೂರ ಇಡುವ ಮೂಲಕ, ಅದನ್ನು ಹಚ್ಚಿಕೊಂಡವರು ಮತ ಹಾಕಲು ಹೋಗುವಷ್ಟರಲ್ಲಿ ಕೈಗಳು ಒಣಗುವಂತೆ ವ್ಯವಸ್ಥೆ ಮಾಡಿಕೊಂಡು ಮತದಾನ ಪ್ರಕ್ರಿಯೆ ಮುಂದುವರೆಸಲಾಗಿದೆ.