ಕ್ಸಿನ್ ಜಿಯಾಂಗ್ ಪ್ರದೇಶದಲ್ಲಿ ಚೀನಾದ ನೀತಿಗಳನ್ನ ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದ ಚೀನಾದ ಅಮೆರಿಕ ರಾಯಭಾರ ಕಚೇರಿಯ ಖಾತೆಯನ್ನ ಟ್ವಿಟರ್ ಲಾಕ್ ಮಾಡಿದೆ. ಚೀನಾ ರಾಯಭಾರಿ ಕಚೇರಿ ಮಾಡಿರುವ ಈ ಟ್ವೀಟ್ ಮಾನವೀಯತೆಯ ವಿರುದ್ಧವಾಗಿದೆ ಎಂದು ಕಾರಣ ನೀಡಿ ಟ್ವಿಟರ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
@ChineseEmbinUS ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಚೀನಾ ರಾಯಭಾರ ಕಚೇರಿ ಈ ತಿಂಗಳಲ್ಲಿ ಟ್ವೀಟ್ ಒಂದನ್ನ ಮಾಡಿತ್ತು. ಇದರಲ್ಲಿ ಉಯಿಘರ್ ಮಹಿಳೆಯರು ಇನ್ಮುಂದೆ ಮಗುವನ್ನ ತಯಾರಿಸುವ ಯಂತ್ರಗಳಲ್ಲ ಎಂದು ಬರೆಯಲಾಗಿತ್ತು ಎಂದು ಚೀನಾ ಪತ್ರಿಕೆ ವರದಿ ಮಾಡಿದೆ.
ಈ ಟ್ವೀಟ್ನ್ನ ಟ್ವಿಟರ್ ಸಂಸ್ಥೆ ಅಳಿಸಿ ಹಾಕಿತ್ತು. ಅಲ್ಲದೇ ಈ ಟ್ವೀಟ್ ಇನ್ಮುಂದೆ ಲಭ್ಯವಿಲ್ಲ ಎಂಬ ಲೇಬಲ್ನ್ನೂ ಹಾಕಲಾಗಿದೆ. ಟ್ವಿಟರ್ನ ನೀತಿಗಳನ್ನ ಉಲ್ಲಂಘಿಸಿ ಮಾಡಲಾಗುವ ಪ್ರತಿಯೊಂದು ಪೋಸ್ಟ್ಗಳನ್ನ ಅಳಿಸಿ ಹಾಕುವ ಅಧಿಕಾರ ಟ್ವಿಟರ್ ಕಂಪನಿಗಿದೆ. ಜನವರಿ 9ರಿಂದ ಚೀನಾ ರಾಯಭಾರ ಕಚೇರಿ ಯಾವುದೇ ಹೊಸ ಟ್ವೀಟ್ಗಳನ್ನ ಪೋಸ್ಟ್ ಮಾಡಿಲ್ಲ.
ಅಮೆರಿಕದಲ್ಲಿರುವ ಚೀನಾ ರಾಯಭಾರ ಕಚೇರಿ ವಿರುದ್ಧ ಟ್ವಿಟರ್ ಸಂಸ್ಥೆ ಕೈಗೊಂಡ ಕ್ರಮದ ಬಗ್ಗೆ ಜೋ ಬಿಡೆನ್ ಸರ್ಕಾರ ಯಾವುದೇ ಹೇಳಿಕೆಗಳನ್ನ ಇಲ್ಲಿಯವರೆಗೆ ನೀಡಿಲ್ಲ.
ನಾವು ಚೀನಾ ರಾಯಭಾರ ಕಚೇರಿ ಮಾಡಿರುವ ಟ್ವೀಟ್ ಬಗ್ಗೆ ತನಿಖೆ ನಡೆಸಿದ್ದೇವೆ. ಇದು ಟ್ವಿಟರ್ನ ನೀತಿ – ನಿಯಮಗಳನ್ನ ಉಲ್ಲಂಘಿಸುವ ಪೋಸ್ಟ್ ಆಗಿದೆ. ನಾವು ನಮ್ಮ ಧರ್ಮ, ಜಾತಿ, ವಯಸ್ಸು, ಮಾಹಾಮಾರಿ, ರಾಷ್ಟ್ರೀಯತೆ ವಿರುದ್ಧ ಅಸಂಬದ್ಧ ಮಾತುಗಳನ್ನಾಡುವವರಿಗೆ ವೇದಿಕೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಟ್ವಿಟರ್ ವಕ್ತಾರ ಗುರುವಾರ ಮಾಹಿತಿ ನೀಡಿದ್ದಾರೆ.