ಚಿಕಾಗೋದ ಮೃಗಾಲಯದಲ್ಲಿದ್ದ 10 ವರ್ಷದ ಹೆಣ್ಣು ಹುಲಿಗೆ ಧೈರ್ಯಶಾಲಿ ವೈದ್ಯರ ತಂಡ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯನ್ನ ಮಾಡಿದೆ.
ಆದರೂ ಈ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಶಸ್ತ್ರ ಚಿಕಿತ್ಸೆ ನಡೆದ ಕೆಲವೇ ಸಮಯದಲ್ಲಿ ಹುಲಿಯ ಸೊಂಟದ ಭಾಗದಲ್ಲಿ ಅಳವಡಿಸಲಾಗಿದ್ದ ಕೃತಕ ವೈದ್ಯಕೀಯ ಸಾಧನ ಅದರ ಸ್ಥಳದಿಂದ ಜಾರಿದೆ ಎಂದು ವರದಿಯಾಗಿದೆ.
ಈ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನ ಪ್ರಾಣಿ ವೈದ್ಯರ ತಂಡ ಬಹಳ ನಾಜೂಕಾಗಿ ನಿರ್ವಹಿಸಿದೆ. ಮೆಲೆನಾ ಎಂಬ ಹುಲಿಗೆ ಕೈಗೊಳ್ಳಲಾದ ಶಸ್ತ್ರಚಿಕಿತ್ಸೆಯಲ್ಲಿ ಮೊದಲು ಆಕೆಯ ಮೂಳೆ ಜೋಡಣೆಯನ್ನ ಬೇರ್ಪಡಿಸಿ ಬಳಿಕ ವೈದ್ಯಕೀಯ ಸಾಧನವನ್ನ ಅಳವಡಿಸಲಾಗಿದೆ.
ಹುಲಿಯ ಕಾಲುಗಳ ಸಾಮರ್ಥ್ಯವನ್ನ ಸರಿಪಡಿಸೋಕೆ ಈ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿತ್ತು. ಇದೀಗ ಹುಲಿಯನ್ನ ನಿಗಾದಲ್ಲಿ ಇರಿಸಲಾಗಿದೆ. ಶಸ್ತ್ರಚಿಕಿತ್ಸೆ ಭಾಗಶಃ ಯಶಸ್ವಿಯಾಗಿದೆ. ಈ ಹುಲಿ ಮೊದಲಿಗಿಂತ ಚೆನ್ನಾಗಿ ನಡೆದಾಡಬಲ್ಲಳು ಎಂದು ಪ್ರಾಣಿ ಸಂಗ್ರಹಾಲಯ ಹೇಳಿದೆ.