ದ್ವಿತೀಯ ವಿಶ್ವ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್ ಸಾಮರ್ಥ್ಯದ ಬಾಂಬೊಂದು ಬಾಲ್ಟಿಕ್ ಸಮುದ್ರದಲ್ಲಿ ಸ್ಪೋಟಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ ಎಂದು ಪೋಲಿಶ್ ಅಧಿಕಾರಿಗಳು ತಿಳಿಸಿದ್ದಾರೆ.
’ಟಾಲ್‌ಬಾಯ್’ ಅಡ್ಡನಾಮದ ಈ ಬಾಂಬಿಗೆ ’ಭೂಕಂಪನದ ಬಾಂಬ್’ ಎಂದು ಕರೆಯಲಾಗುತ್ತಿದ್ದು, 1945ರಲ್ಲಿ ನಾಝಿ ಸಮರನೌಕೆಯ ಮೇಲೆ ರಾಯಲ್ ವಾಯುಪಡೆ ಈ ಬಾಂಬನ್ನು ಹಾಕಿತ್ತು. ವಾಯುವ್ಯ ಪೋಲೆಂಡ್‌ನ ಬಂದರು ನಗರಿ ಸ್ವಿನೋಸೆಯಲ್ಲಿ ಡ್ರೆಡ್ಜಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ಬಾಂಬಿನ ಮೂತಿ ಕಂಡಿದೆ.
ಆರು ಮಿಟರ್‌ಗಿಂತ ಉದ್ದವಿರುವ ಈ ಬಾಂಬ್‌ನಲ್ಲಿ 2.4 ಟನ್ ಸ್ಪೋಟಕಗಳಿದ್ದು, ಇದು 3.6 ಟನ್ TNTಗೆ ಸಮನಾಗಿದೆ. ಪಕ್ಕದಲ್ಲೇ ಸೇತುವೆಯೊಂದು ಇರುವ ಕಾರಣ ಈ ಬಾಂಬ್ ಅನ್ನು ಸಾಂಪ್ರದಾಯಿಕ ರೀತಿಯಲ್ಲಿ ನಿಯಂತ್ರಿತ ಸ್ಪೋಟ ಮಾಡುವ ಆಯ್ಕೆ ಇರಲಿಲ್ಲ.
ಹೀಗಾಗಿ ಸ್ಪೋಟಕವನ್ನೆಲ್ಲಾ ಯಾವುದೇ ಸ್ಫೋಟವಿಲ್ಲದೇ ಹಾಗೇ ಸುಟ್ಟುಬಿಡುವ ತಂತ್ರವೊಂದನ್ನು ನೌಕಾಪಡೆ ಅನುಸರಿಸಿದೆ. ರಿಮೋಟ್ ನಿಯಂತ್ರಕದಿಂದ ಶೆಲ್ ಒಳಗೆ ಉರಿಯುವ ಪ್ರಕ್ರಿಯೆಯನ್ನು ನಿಯಂತ್ರಿಸಲಾಗಿದೆ.