ಇನ್ನು ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬರು ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಅಮೆರಿಕಾದ ಟೆನ್ನೆಸ್ಸೀ ಬಳಿ ನಡೆದಿದೆ.
ಆಂಧ್ರಪ್ರದೇಶದ ಪೊಲಾವರಪು ಕಮಲಾ ಮೃತಪಟ್ಟವರಾಗಿದ್ದು, ತಮ್ಮ ಭಾವಿ ಪತಿಯೊಡನೆ ಬಾಲ್ಡ್ ಜಲಪಾತಕ್ಕೆ ಪ್ರವಾಸ ತೆರಳಿದ್ದರು. ಈ ವೇಳೆ ಇಬ್ಬರೂ ಜಲಪಾತದ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದಾರೆ.
ಸ್ಥಳದಲ್ಲಿದ್ದವರು ಕಮಲಾ ಅವರ ಸಂಗಾತಿಯನ್ನು ರಕ್ಷಿಸಿದ್ದು, ಕಮಲಾ ಅವರನ್ನು ಮೇಲಕ್ಕೆತ್ತುವ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇಂಜಿನಿಯರಿಂಗ್ ಪದವೀಧರರಾಗಿದ್ದ ಕಮಲಾ ಉನ್ನತ ವ್ಯಾಸಂಗಕ್ಕೆ ಅಮೆರಿಕಾಕ್ಕೆ ತೆರಳಿದ್ದರೆಂದು ಹೇಳಲಾಗಿದೆ.