ಕೊರೊನಾ ವೈರಸ್ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ತರ್ತಿದೆ. ಇದ್ರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಈ ಮಧ್ಯೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ತಾಯಿಯ ಎದೆ ಹಾಲು ಕೊರೊನಾ ಕೊಲ್ಲುತ್ತದೆ ಎಂದು ಚೀನಾ ಸಂಶೋಧಕರು ಹೇಳಿದ್ದಾರೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದ ಮಹಿಳೆ ಮಕ್ಕಳಿಗೆ ಎದೆ ಹಾಲು ನೀಡಬಾರದು ಎನ್ನಲಾಗಿತ್ತು. ನಂತ್ರ ಸ್ತನಪಾನ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
ಬೀಜಿಂಗ್‌ನ ಸಂಶೋಧಕರು ಅಧ್ಯಯನದ ಸಮಯದಲ್ಲಿ ಮಾನವ ಜೀವಕೋಶಗಳು ಮತ್ತು ಪ್ರಾಣಿ ಕೋಶಗಳ ಮೇಲೆ ಎದೆ ಹಾಲನ್ನು ಪರೀಕ್ಷಿಸಿದ್ದಾರೆ. ವಿವಿಧ ರೀತಿಯ ಕೋಶಗಳನ್ನು ಪರೀಕ್ಷಿಸಿದ ನಂತರ, ಎದೆ ಹಾಲಿನಿಂದಾಗಿ ಹೆಚ್ಚಿನ ವೈರಸ್‌ಗಳು ಸಾಯುತ್ತವೆ ಎಂಬುದು ಕಂಡು ಬಂದಿದೆ. ಬೀಜಿಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಟಾಂಗ್ ಯಿಗಾಂಗ್, ತಾಯಿಯ ಹಾಲು ವೈರಲ್ ಬಾಂಧವ್ಯವನ್ನು ನಿರ್ಬಂಧಿಸುತ್ತದೆ ಎಂದಿದ್ದಾರೆ. ಸಂಶೋಧಕರ ತಂಡವು ಶುಕ್ರವಾರ ಈ ಅಧ್ಯಯನವನ್ನು ಪ್ರಕಟಿಸಿದೆ.
ಈ ಮೊದಲು ಜೂನ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ಮಕ್ಕಳಿಗೆ ಆಹಾರವನ್ನು ನೀಡುತ್ತಿರುವ ವಿವಿಧ ದೇಶಗಳ 46 ಮಹಿಳೆಯರನ್ನು ಅಧ್ಯಯನ ಮಾಡಿತ್ತು. ಅಧ್ಯಯನದ ಸಮಯದಲ್ಲಿ, ಮೂರು ತಾಯಿಯ ಎದೆ ಹಾಲಿನಲ್ಲಿ ವೈರಲ್ ಜೀನ್‌ಗಳಿವೆ ಎಂದು ಕಂಡು ಬಂದಿತ್ತು. ಆದರೆ ಇದು ಸೋಂಕಿನ ಪುರಾವೆಗಳನ್ನು ಒದಗಿಸಲಿಲ್ಲ. ಒಂದು ಮಗುವಿಗೆ ಕೊರೊನಾ ಕಾಣಿಸಿಕೊಂಡಿತ್ತು. ಬಾಹ್ಯ ಸಂಪರ್ಕದಿಂದ ಮಗುವಿಗೆ ಕೊರೊನಾ ಕಾಣಿಸಿಕೊಂಡಿರುಬಹುದು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.