ದಿನಗೂಲಿ ಕಾರ್ಮಿಕರಾಗಿದ್ದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಥೆರ್ಕೂರೈ ಗ್ರಾಮದ ನಿವಾಸಿಗಳಾಗಿದ್ದ ಪರಮೇಶ್ವರನ್ ಹಾಗೂ ಉಮಾವತಿ 10 ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಆದರೆ ಯುವತಿ ಅನ್ಯಜಾತಿಯಾಗಿದ್ದರಿಂದ ಪರಮೇಶ್ವರನ್ ಪೋಷಕರು ಈ ಮದುವೆಗೆ ಒಪ್ಪಿರಲಿಲ್ಲ. ಆದರೆ ಉಮಾವತಿ ಕುಟುಂಬಸ್ಥರಿಂದ ಬೆಂಬಲ ಸಿಕ್ಕಿತ್ತು.
ಉಮಾವತಿ ಹಾಗೂ ಪರಮೇಶ್ವರ್ ವಿವಾಹವಾದ ಬಳಿಕ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ಇವರಿಗೆ ಬಹಿಷ್ಕಾರ ಹಾಕಿದ್ದರು. ಅಂದರೆ ಅವರು ಗ್ರಾಮದ ದೇವಸ್ಥಾನ , ಕುಡಿಯುವ ನೀರಿನ ಸ್ಥಳ ಹೀಗೆ ಎಲ್ಲಿಯೂ ಕೂಡ ಪ್ರವೇಶಿಸುವಂತಿರಲಿಲ್ಲ. ಹೀಗಾಗಿ ಗ್ರಾಮದ ಗಡಿ ಭಾಗದಲ್ಲಿ ಈ ದಂಪತಿ ವಾಸವಾಗಿತ್ತು.
ಉಮಾವತಿ ತಾಯಿಗೆ ಸೇರಿದ ಜಾಗದಲ್ಲಿ ಮನೆ ಮಾಡಿ ಜೀವನ ಮಾಡುವ ಬಗ್ಗೆ ದಂಪತಿ ಯೋಚಿಸಿದ್ದರು. ಆದರೆ ಗ್ರಾಮಸ್ಥರು ಮಾತ್ರ ಕಲ್ಲು ಹಾಗೂ ಮುಳ್ಳನ್ನು ಹರಡಿ ಗ್ರಾಮಕ್ಕೆ ಬರುವ ಮಾರ್ಗವನ್ನೇ ಬಂದ್ ಮಾಡಿಸಿದ್ರು. ಬರೋಬ್ಬರಿ 10 ವರ್ಷಗಳ ಬಹಿಷ್ಕಾರದ ಬಳಿಕ ಇದೀಗ ಈ ದಂಪತಿ ಗ್ರಾಮಕ್ಕೆ ಮರಳಲು ನಿರ್ಧರಿಸಿದ್ದಾರೆ.
ದಂಪತಿ ತಮಗಾದ ಅನ್ಯಾಯದ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದೀಗ ಈ ಪ್ರಕರಣವನ್ನು ಕಂದಾಯ ಇಲಾಖೆ ಕೈಗೆತ್ತಿಕೊಂಡಿದೆ.
ತಹಸೀಲ್ದಾರ್ ಪರಮೇಶ್ವರನ್ ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿ ಈ ಸಂಬಂಧ ಚರ್ಚೆ ನಡೆಸಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಕ್ಕೆ ಭೇಟಿ ನೀಡಿದ್ದೇವೆ. ಸಮಸ್ಯೆ ಬಗೆಹರಿದಿದೆ. ಅವರ ಜಾಗಕ್ಕೆ ಮರಳಲು ದಾರಿಯನ್ನು ಸುಗಮಗೊಳಿಸಿದ್ದೇವೆ. ಶೀಘ್ರದಲ್ಲೇ ದಾಖಲೆಗಳನ್ನು ನೀಡುತ್ತೇವೆ ಎಂದು ತಹಶೀಲ್ದಾರ್ ಪರಮೇಶ್ವನ್ ಹೇಳಿದ್ದಾರೆ.
ಅಲ್ಲದೇ ಯಾವುದೇ ಕಾರಣಕ್ಕೂ ದಂಪತಿಗೆ ಕಿರುಕುಳ ನೀಡುವಂತಿಲ್ಲ ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ವಾರ್ನಿಂಗ್ ನೀಡಿದ್ದಾರೆ.