ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ನಿರ್ಮಾಣಗೊಂಡಿದ್ದ 7 ಕಿಲೋಮೀಟರ್ ರಸ್ತೆ ಉದ್ಘಾಟನೆಗೆ ತೆರಳಿದ್ದ ವೇಳೆ ಬಿಜೆಪಿ ಶಾಸಕಿಯೊಬ್ಬರು ಮುಜುಗರದ ಪ್ರಸಂಗಕ್ಕೆ ಸಾಕ್ಷಿಯಾದ ಘಟನೆಯು ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ ನಡೆದಿದೆ. ರಸ್ತೆ ಉದ್ಘಾಟನೆ ಪ್ರಯುಕ್ತ ತೆಂಗಿನಕಾಯಿ ಒಡೆಯುವ ವೇಳೆ ರಸ್ತೆಯೇ ಬಿರುಕುಬಿಟ್ಟಿದೆ..!
ಇದರಿಂದ ಕೋಪಗೊಂಡ ಬಿಜ್ನೋರ್ ಸಾದರ್ ಕ್ಷೇತ್ರದ ಶಾಸಕಿ ಸುಚಿ ಮೌಸಮ್ ಚೌಧರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಕಾದು ಬಳಿಕ ರಸ್ತೆಯ ಕಾಮಗಾರಿ ಸ್ಯಾಂಪಲ್ನ್ನು ತನಿಖೆ ಮಾಡುವಂತೆ ಆದೇಶಿಸಿದ್ದಾರೆ.
ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಶಾಸಕಿ ಸುಚಿ ಮೌಸಂ ಚೌಧರಿ ಆದೇಶಿಸಿದ್ದಾರೆ. ಅಲ್ಲದೇ ಡಾಂಬರು ಮಾದರಿಯನ್ನು ಸಂಗ್ರಹ ಮಾಡಲು ಸ್ಥಳದಲ್ಲಿ ವಿಶಾಲವಾದ ಗುಂಡಿಯನ್ನು ತೋಡಲು ಶಾಸಕಿ ಕೂಡ ಸಹಾಯ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶಾಸಕಿ ಸುಚಿ ಮೌಸಂ ಚೌಧರಿ, ನೀರಾವರಿ ಇಲಾಖೆಯು 1.16 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣ ಕಾರ್ಯವನ್ನು ಮಾಡಿದೆ. ಇದು ಸುಮಾರು 7.5 ಕಿಲೋಮೀಟರ್ ಉದ್ದದ ರಸ್ತೆಯಾಗಿದ್ದು ನನ್ನನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇಲ್ಲಿ ನೋಡಿದರೆ ತೆಂಗಿನಕಾಯಿ ಒಡೆಯುತ್ತಲೇ ರಸ್ತೆ ಬಿರುಕುಬಿಟ್ಟಿದೆ ಎಂದು ಹೇಳಿದ್ರು.