alex Certify ಮೈನವಿರೇಳಿಸುತ್ತೆ ಕಾಬೂಲ್‌ ನಿಂದ ಭಾರತೀಯ ರಾಯಭಾರಿ ಕಛೇರಿ ಸಿಬ್ಬಂದಿ ಕರೆ ತಂದಿದ್ದರ ಹಿಂದಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈನವಿರೇಳಿಸುತ್ತೆ ಕಾಬೂಲ್‌ ನಿಂದ ಭಾರತೀಯ ರಾಯಭಾರಿ ಕಛೇರಿ ಸಿಬ್ಬಂದಿ ಕರೆ ತಂದಿದ್ದರ ಹಿಂದಿನ ಕಥೆ

ತಾಲಿಬಾನ್ ಕಪಿಮುಷ್ಠಿಗೆ ಕಾಬೂಲ್ ಬಂದ ಬಳಿಕ ಅಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ರಾಯಭಾರ ಕಾರ್ಯಾಲಯದ ಕಾಂಪೌಂಡ್‌ ಒಳಗೇ 36 ಗಂಟೆಗಳ ಕಾಲ ಜೀವ ಕೈಯಲ್ಲಿ ಹಿಡಿದು ಕಾದು ಕುಳಿತಿದ್ದ ಭಾರತೀಯ ಸಿಬ್ಬಂದಿಯನ್ನು ಮಂಗಳವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಎಸ್ಕಾರ್ಟ್ ಮಾಡಲಾಯಿತು.

“ಪ್ರತಿಯೊಬ್ಬರನ್ನೂ ಒಮ್ಮೆಲೇ ಕರೆದೊಯ್ಯುವುದು ಮೊದಲಿನ ಪ್ಲಾನ್ ಆಗಿತ್ತು. ಆಗಸ್ಟ್‌ 16ರಂದು (ಸೋಮವಾರ) 45 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಕಾರುಗಳ ಸಮೂಹವೊಂದು ವಿಮಾನ ನಿಲ್ದಾಣ ತಲುಪಿತು. ಇದೇ ವೇಳೆ ಇಂಥದ್ದೇ ಇನ್ನೆರಡು ಸಮೂಹವನ್ನು ಮರಳಿ ಹೋಗಲು ತಾಲಿಬಾನ್ ಆದೇಶಿಸಿತು’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡನೇ ಸಮೂಹದಲ್ಲಿ 80 ಭಾರತೀಯರು ಇದ್ದು, ಭಾರತೀಯರ ಮೇಲೆ ಮಾತ್ರವೇ ಈ ನಿಷೇಧಾಜ್ಞೆ ಹೇರಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಈ ವೇಳೆ ರಷ್ಯಾ ಸೇರಿದಂತೆ ಅನೇಕ ದೇಶಗಳೊಂದಿಗೆ ಸಂಪರ್ಕ ಸಾಧಿಸಿದ ಭಾರತ ಸರ್ಕಾರ ಕೊನೆಗೂ, ತಾಲಿಬಾನಿಗಳ ಮನವೊಲಿಸಿ, ತನ್ನ ಅಧಿಕಾರಿಗಳನ್ನು ಮನೆಗೆ ಕರೆಯಿಸಿಕೊಳ್ಳಲು ಸಫಲವಾಗಿದೆ.

“ನಮ್ಮ ರಾಯಭಾರಿ ಸೇರಿದಂತೆ ಅನೇಕ ಮಂದಿಯನ್ನು ವಿಮಾನ ನಿಲ್ದಾಣಕ್ಕೆ ತಾಲಿಬಾನ್ ಎಸ್ಕಾರ್ಟ್ ಮಾಡಿದೆ. ಅಮೆರಿಕನ್ನರು ಸೇರಿದಂತೆ ಇನ್ನಿತರ ಏಜೆನ್ಸಿಗಳ ನೆರವಿನಿಂದ ನಮ್ಮ ವಿಮಾನವು ಟೇಕಾಫ್ ಆಗಿದೆ” ಎಂದು ಇದೇ ಅಧಿಕಾರಿ ತಿಳಿಸಿದ್ದಾರೆ.

ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ಐಟಿಬಿಪಿ ಯೋಧರನ್ನೂ ಮರಳಿ ಕರೆಯಿಸಿಕೊಳ್ಳಲು ಭಾರತ ಸಫಲವಾಯಿತಾದರೂ, ಐಟಿಬಿಪಿಯ ಶಸ್ತ್ರಸಜ್ಜಿತ ವಾಹನ ಹಾಗೂ ಅನೇಕ ಶಸ್ತ್ರಗಳು ವಿಮಾನ ನಿಲ್ದಾಣದಲ್ಲೇ ಇವೆ.

ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿನ ರಾಯಭಾರ ಕಾರ್ಯಾಲಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಭಾರತಕ್ಕೆ ಮರಳಲು ಇಚ್ಛಿಸುವ ನಾಗರಿಕರನ್ನು ಮರಳಿ ಕರೆತರಲು ನೋಡುತ್ತಿದ್ದೇವೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...