
“ಪ್ರತಿಯೊಬ್ಬರನ್ನೂ ಒಮ್ಮೆಲೇ ಕರೆದೊಯ್ಯುವುದು ಮೊದಲಿನ ಪ್ಲಾನ್ ಆಗಿತ್ತು. ಆಗಸ್ಟ್ 16ರಂದು (ಸೋಮವಾರ) 45 ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ಕಾರುಗಳ ಸಮೂಹವೊಂದು ವಿಮಾನ ನಿಲ್ದಾಣ ತಲುಪಿತು. ಇದೇ ವೇಳೆ ಇಂಥದ್ದೇ ಇನ್ನೆರಡು ಸಮೂಹವನ್ನು ಮರಳಿ ಹೋಗಲು ತಾಲಿಬಾನ್ ಆದೇಶಿಸಿತು’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡನೇ ಸಮೂಹದಲ್ಲಿ 80 ಭಾರತೀಯರು ಇದ್ದು, ಭಾರತೀಯರ ಮೇಲೆ ಮಾತ್ರವೇ ಈ ನಿಷೇಧಾಜ್ಞೆ ಹೇರಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
ಈ ವೇಳೆ ರಷ್ಯಾ ಸೇರಿದಂತೆ ಅನೇಕ ದೇಶಗಳೊಂದಿಗೆ ಸಂಪರ್ಕ ಸಾಧಿಸಿದ ಭಾರತ ಸರ್ಕಾರ ಕೊನೆಗೂ, ತಾಲಿಬಾನಿಗಳ ಮನವೊಲಿಸಿ, ತನ್ನ ಅಧಿಕಾರಿಗಳನ್ನು ಮನೆಗೆ ಕರೆಯಿಸಿಕೊಳ್ಳಲು ಸಫಲವಾಗಿದೆ.
“ನಮ್ಮ ರಾಯಭಾರಿ ಸೇರಿದಂತೆ ಅನೇಕ ಮಂದಿಯನ್ನು ವಿಮಾನ ನಿಲ್ದಾಣಕ್ಕೆ ತಾಲಿಬಾನ್ ಎಸ್ಕಾರ್ಟ್ ಮಾಡಿದೆ. ಅಮೆರಿಕನ್ನರು ಸೇರಿದಂತೆ ಇನ್ನಿತರ ಏಜೆನ್ಸಿಗಳ ನೆರವಿನಿಂದ ನಮ್ಮ ವಿಮಾನವು ಟೇಕಾಫ್ ಆಗಿದೆ” ಎಂದು ಇದೇ ಅಧಿಕಾರಿ ತಿಳಿಸಿದ್ದಾರೆ.
ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ಐಟಿಬಿಪಿ ಯೋಧರನ್ನೂ ಮರಳಿ ಕರೆಯಿಸಿಕೊಳ್ಳಲು ಭಾರತ ಸಫಲವಾಯಿತಾದರೂ, ಐಟಿಬಿಪಿಯ ಶಸ್ತ್ರಸಜ್ಜಿತ ವಾಹನ ಹಾಗೂ ಅನೇಕ ಶಸ್ತ್ರಗಳು ವಿಮಾನ ನಿಲ್ದಾಣದಲ್ಲೇ ಇವೆ.
ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿನ ರಾಯಭಾರ ಕಾರ್ಯಾಲಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಭಾರತಕ್ಕೆ ಮರಳಲು ಇಚ್ಛಿಸುವ ನಾಗರಿಕರನ್ನು ಮರಳಿ ಕರೆತರಲು ನೋಡುತ್ತಿದ್ದೇವೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.