ದಿನ ಪತ್ರಿಕೆಗಳನ್ನ ಹೊಂದಿರುವ ಕಾಯುವಿಕೆ ಕೊಠಡಿ, ವೈ-ಫೈ ವ್ಯವಸ್ಥೆ, ಟಿವಿ ಹೀಗೆ ಸಾಕಷ್ಟು ಸೌಲಭ್ಯಗಳನ್ನ ಹೊಂದಿರುವ ಐಷಾರಾಮಿ ಸಾರ್ವಜನಿಕ ಶೌಚಾಲಯವು ಮುಂಬೈನ ಜುಹು ಗಲ್ಲಿಯಲ್ಲಿ ಲೋಕಾರ್ಪಣೆಗೊಂಡಿದೆ. ಬರೋಬ್ಬರಿ 4000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ 2 ಅಂತಸ್ತಿನ ಶೌಚಾಲಯ ಇದಾಗಿದೆ. ನೆಲ ಮಹಡಿಯಲ್ಲಿ 60 ಶೌಚಾಲಯಗಳಿದ್ದರೆ ಮೇಲ್ಮಹಡಿಯಲ್ಲಿ 28 ಶೌಚಾಲಯಗಳಿವೆ. ಈ ಸಾರ್ವಜನಿಕ ಶೌಚಾಲಯವನ್ನ ಬಿಎಂಸಿ ನಿರ್ಮಾಣ ಮಾಡಿದೆ.
ಈ ಸಾರ್ವಜನಿಕ ಶೌಚಾಲಯವು 60 ಸಾವಿರ ಕೊಳಗೇರಿ ನಿವಾಸಿಗಳನ್ನ ಗಮನದಲ್ಲಿಟ್ಟು ನಿರ್ಮಾಣ ಮಾಡಲಾಗಿದೆ. ಈ ಶೌಚಾಲಯದ ಅನಿಯಮಿತ ಬಳಕೆಗಾಗಿ ಪ್ರತಿ ಕುಟುಂಬವು ತಿಂಗಳಿಗೆ 60 ರೂಪಾಯಿ ಪಾವತಿ ಮಾಡಬೇಕು ಎಂದು ಬಿಎಂಸಿ ಹೇಳಿದೆ. ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಾಯ್ ಜಗ್ತಾಪ್ ಈ ಸಾರ್ವಜನಿಕ ಶೌಚಾಲಯವನ್ನ ಉದ್ಘಾಟನೆ ಮಾಡಿದ್ದಾರೆ.
ಇದು ನಗರದ ಅತಿದೊಡ್ಡ ಸಾರ್ವಜನಿಕ ಶೌಚಾಲಯ ಮಾತ್ರವಲ್ಲ ಇದರ ಜೊತೆಯಲ್ಲಿ 24 ಗಂಟೆಯೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಮೇಲ್ಮಹಡಿ ಪುರುಷರ ವಿಭಾಗವಾಗಿದ್ದರೆ, ನೆಲಮಹಡಿ ಮಹಿಳೆಯರಿಗೆ ಎಂದು ಮೀಸಲಿಡಲಾಗಿದೆ. ಇದರ ಜೊತೆಯಲ್ಲಿ ನಾಲ್ಕು ಬ್ಲಾಕ್ಗಳನ್ನ ವಿಕಲಾಂಗ ಚೇತನರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ಮೆಹರ್ ಮೊಹ್ಸಿನ್ ಹೈದರ್ ಹೇಳಿದ್ರು.
ಮುಂಬೈನ ಟ್ರಾಫಿಕ್ ಸಿಗ್ನಲ್ಗಳಲ್ಲಿ 80 ಸುಸಜ್ಜಿತ ಹವಾನಿಯಂತ್ರಿತ ಮೊಬೈಲ್ ಶೌಚಾಲಯಗಳ ವ್ಯಾನ್ಗಳನ್ನ ಸ್ಥಾಪಿಸಲು ಬಿಎಂಸಿ ಸಿದ್ಧತೆ ನಡೆಸುತ್ತಿದೆ. ಆದರೆ ಕೊರೊನಾ ಕಾರಣದಿಂದಾಗಿ ಈ ಯೋಜನೆಯು ವಿಳಂಬಗತಿಯಲ್ಲಿ ಸಾಗುತ್ತಿದೆ.