
ಸಿಡಿಲು ಬಡಿದು ಜೀವಹಾನಿಯಾಗುವುದು ಸಾಮಾನ್ಯ. ಮಳೆ ಬರುವ ಸಂದರ್ಭದಲ್ಲಿ ಬಯಲು ಪ್ರದೇಶ ಅಥವಾ ಮರದ ಕೆಳಗೆ ನಿಲ್ಲುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ.
ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮನೆಯಲ್ಲಿನ ಪ್ಲೇಸ್ಟೇಷನ್ನಲ್ಲಿ ಆಡುವಾಗ ಸಿಡಿಲು ಬಡಿತವಾಗಿದೆ.
ಯುಕೆಯ ಆಕ್ಸ್ಫರ್ಡ್ಶೈರ್ನಏಡನ್ ರೋವನ್ ತನ್ನ ಲಿವಿಂಗ್ ರೂಮ್ನಲ್ಲಿ ಮಂಚದ ಮೇಲೆ ಕುಳಿತು, ತನ್ನ ಪ್ಲೇಸ್ಟೇಷನ್ನಲ್ಲಿ ಸ್ಟ್ರೇ ಆಡುತ್ತಿದ್ದಾಗ ಸಿಡಿಲು ಬಡಿದಿದೆ.
ಈ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, ಆ ಸಂದರ್ಭವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.
ಆಸ್ಪತ್ರೆಯಿಂದ ತಮ್ಮ ಚಿತ್ರವನ್ನು ಹಂಚಿಕೊಂಡ ಏಡನ್ ಪೋಸ್ಟ್ಗೆ ವಿವರವಾದ ಶೀರ್ಷಿಕೆ ನೀಡಿದ್ದಾರೆ, ನಾನು ಪ್ಲೇಸ್ಟೇಷನ್ನಲ್ಲಿ ಆಟವಾಡುತ್ತಿದ್ದೆ ಈ ವೇಳೆ ಭಾರೀ ಕಂಪನದ ಅನುಭವವಾಯಿತು. ತೆರೆದ ಕಿಟಕಿಯ ಮೂಲಕ ಸಿಡಿಲು ಬಡಿಯಿತು ಎಂಬುದು ನಂತರ ಅರಿವಿಗೆ ಬಂದಿತು. ನಾನು ಈಗ ಚೆನ್ನಾಗಿದ್ದೇನೆ, ತುಂಬಾ ನೋವಿದೆ. ತಲೆನೋವು ನರಕವಾಗಿದೆ, ಕೈಗೆ ಸುಟ್ಟ ಗಾಯಗಳಾಗಿದೆ ಎಂದು ತಮ್ಮ ದೇಹಕ್ಕಾದ ಸಂಕಟವನ್ನು ತೋಡಿಕೊಂಡಿದ್ದಾರೆ.
ಕುಟುಂಬದವರ ನೆರವಿನಿಂದ ಆರನ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಏಡನ್ ಅವರನ್ನು ಹಲವಾರು ಗಂಟೆಗಳ ಕಾಲ ಪರಿಶೀಲನೆಗೆ ಒಳಪಡಿಸಲಾಯಿತು. ಹಲವಾರು ವಿಭಾಗದ ಒಂಬತ್ತು ವೈದ್ಯರು ಅವನನ್ನು ಪರೀಕ್ಷಿಸಲು ಬಂದಿದ್ದರು. ನೆಟ್ಟಿಗರು ಎಲ್ಲ ಸಂಗತಿ ಓದಿ, ಶೀಘ್ರವೇ ಚೇತರಿಸಿಕೊಳ್ಳುವಂತೆ ಕಾಮೆಂಟ್ ಮಾಡಿದ್ದಾರೆ.