alex Certify WTP ಕಾಮಗಾರಿ ವಿರೋಧಿಸಿ ವಿನೂತನ ಪ್ರತಿಭಟನೆ: ಎಡೆ ಇಟ್ಟು ತಿಥಿ ಆಚರಿಸಿದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WTP ಕಾಮಗಾರಿ ವಿರೋಧಿಸಿ ವಿನೂತನ ಪ್ರತಿಭಟನೆ: ಎಡೆ ಇಟ್ಟು ತಿಥಿ ಆಚರಿಸಿದ ಗ್ರಾಮಸ್ಥರು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ಕೋಡ್ಲು ಗ್ರಾಮದಲ್ಲಿ 11 ದಿನಗಳ ಹಿಂದೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರಂಭಗೊಂಡ ಜಲ್‌ ಜೀವನ್‌ ಮಿಷನ್‌ನ ನೀರು ಶುದ್ಧೀಕರಣ ಘಟಕ (WTP)ದ ಕಾಮಗಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ಹೊಸ ಸ್ವರೂಪಕ್ಕೆ ತಿರುಗಿತು.

ಜನರ ಸಲಹೆಗಳಿಗೆ ಬೆಲೆ ನೀಡದೆ, ಜನಾಭಿಪ್ರಾಯಯವನ್ನು ಪೊಲೀಸರ ಮೂಲಕ ಹತ್ತಿಕ್ಕಿದ ಸರಕಾರ ನೀರಿನ ಶುದ್ಧೀಕರಣ ಘಟಕದ ಕಾಮಗಾರಿಗೆ ಚಾಲನೆ ನೀಡಿ 11 ದಿನಗಳ ತುಂಬಿದೆ. ಹೀಗಾಗಿ, ಶಿವರಾತ್ರಿಯ ಮುನ್ನಾದಿನಾಗಿರುವ ಇವತ್ತು ಜನರ ಆಶಯಗಳ ಸಾವಿನ ಸಾಂಕೇತಿಕವಾಗಿ ಪ್ರತಿಭಟನಾ ಸ್ಥಳದಲ್ಲಿ ತಿಥಿಯನ್ನು ಆಚರಿಸಲಾಗಿದೆ.

ಪ್ರತಿಭಟನೆಯ ಹೊಣೆ ಹೊತ್ತಿರುವ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಹಾಗೂ ತಾಲೂಕು ರೈತ ಸಂಘ ಈ ಬಗ್ಗೆ ಮಾಹಿತಿ ನೀಡಿವೆ.
ತೀರ್ಥಹಳ್ಳಿ- ಶೃಂಗೇರಿ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ಕೋಡ್ಲು ಗ್ರಾಮದಲ್ಲಿ ಗ್ರಾಮಸ್ಥರು ತಮಗೆ ತೋಚಿದ ರೀತಿಯಲ್ಲಿ ಸರ್ಕಾರದ ಕಾಮಗಾರಿಗೆ ಅಪರ ಕರ್ಮಗಳನ್ನು ನೆರವೇರಿಸಿದ್ದಾರೆ.

ಬಾಳೆ ಎಲೆಯ ಮೇಲೆ ಕಾಮಗಾರಿಯ ಲಂಚದ ಸಂಕೇತವಾಗಿ ಹಣದ ನೋಟುಗಳು, ಜತೆಗೆ, ಮೊಟ್ಟೆ, ಮಾಂಸ, ಮದ್ಯವನ್ನು ಎಡೆಯ ರೂಪದಲ್ಲಿ ಇಡುವ ಮೂಲಕ ಕಾಮಗಾರಿಯನ್ನು ಲೇವಡಿ ಮಾಡಿದ್ಧಾರೆ.

ಎಡೆ ಇಡುವ ಸಮಯದಲ್ಲಿ ರೈತರು ಬಾಯಿ ಬಡಿದುಕೊಳ್ಳುತ್ತಾ ವಿಡಂಬನೆಯ ಮೂಲಕ ಭ್ರಷ್ಟ ವ್ಯವಸ್ಥೆಗೆ ಶಾಂತಿಯುತವಾಗಿ ಅರ್ಥೈಸುವ ಕೆಲಸ ಮಾಡಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ತೋರಿಸಬಾರದು ಎಂದು ರೈತ ನಾಯಕರು ತಿಳಿಸಿದ್ದಾರೆ.

ಸಾಂಕೇತಿಕವಾಗಿ ತಿಥಿ ನೆರವೇರಿಸುವ ಮೂಲಕ ಜನ ವಿರೋಧಿ ಸರಕಾರದ ಸಾವಿನ ಸೂತಕವನ್ನೂ ಕಳೆದುಕೊಂಡಿದ್ದೇವೆ. ನಾಳೆಯಿಂದ ಹೋರಾಟ ಹೊಸ ಹಾದಿಯಲ್ಲಿ ಕ್ರಮಿಸಲಿದೆ. ಅಂತಿಮವಾಗಿ ತಾಲೂಕಿನ ಪ್ರತಿ ಮನೆಗೂ ವೈಜ್ಞಾನಿಕವಾಗಿ ಕುಡಿಯುವ ನೀರು ತಲುಪುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸಮಿತಿ ಹಾಗೂ ರೈತ ಸಂಘದ ತಾಲೂಕು ಘಟಕದ ಮುಖಂಡರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...