ಪೊಲೀಸರೆಂದರೆ ಒರಟು, ಅವರು ಜನರೊಂದಿಗೆ ದಾರ್ಷ್ಯದಿಂದ ವ್ಯವಹರಿಸುತ್ತಾರೆ……. ಎಂದೆಲ್ಲಾ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ.
ಆದರೆ, ಪೊಲೀಸರೂ ಮನುಷ್ಯರು, ಅವರಲ್ಲೂ ಅಂತಃಕರಣ ಇರುತ್ತದೆ ಎಂದು ಭಾವಿಸುವವರ ಸಂಖ್ಯೆ ಅತ್ಯಂತ ವಿರಳ.
ಇಂತಹ ಅಂತಃಕರಣ ಹೊಂದಿದವರ ಸಾಲಿಗೆ ಮಧ್ಯಪ್ರದೇಶದ ಇಂದೋರ್ ನ ವಿಜಯನಗರ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿ ಸೇರುತ್ತಾರೆ.
ಯುವಕನೊಬ್ಬ ಪ್ರತಿದಿನ ಸೈಕಲ್ ನಲ್ಲಿ ಆಹಾರ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಕಾಯಕ ಮಾಡುತ್ತಿದ್ದ. ಇದನ್ನು ಕಂಡ ಪಹರೆ ಪೊಲೀಸರು ಯುವಕನನ್ನು ತಡೆದು ನಿಲ್ಲಿಸಿ ಆತನ ಪರಿಸ್ಥಿತಿಯನ್ನು ಕೇಳಿದ್ದಾರೆ. ಅದಕ್ಕೆ ಆತ ಆರ್ಥಿಕ ಮುಗ್ಗಟ್ಟು ಇರುವುದರಿಂದ ಮೋಟರ್ ಸೈಕಲ್ ಖರೀದಿಸಲು ಸಾಧ್ಯವಾಗದೆ ಸೈಕಲ್ ನಲ್ಲಿಯೇ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್
ಈ ಬಗ್ಗೆ ಪೊಲೀಸ್ ಸಿಬ್ಬಂದಿ ಚರ್ಚೆ ನಡೆಸಿ ಆತನಿಗೊಂದು ಮೋಟರ್ ಸೈಕಲ್ ಖರೀದಿ ಮಾಡಿಕೊಡಲು ನಿರ್ಧರಿಸಿದ್ದಾರೆ. ಎಲ್ಲರೂ ತಮ್ಮ ಶಕ್ತ್ಯಾನುಸಾರ ಹಣವನ್ನು ಒಟ್ಟುಗೂಡಿಸಿ 32,000 ರೂಪಾಯಿಗಳನ್ನು ಮೋಟರ್ ಸೈಕಲ್ ಖರೀದಿಗೆ ಡೌನ್ ಪೇಮೆಂಟ್ ಮಾಡಿ ಹೊಸ ಬೈಕ್ ಕೊಡಿಸಿದ್ದಾರೆ.
ಆತ ಬೈಕ್ ನಲ್ಲಿ ದುಡಿದು ಮಾಸಿಕ ಕಂತುಗಳನ್ನು ಪಾವತಿಸಬೇಕಿದೆ. ಒಂದು ವೇಳೆ ಮತ್ತೆ ಆರ್ಥಿಕ ಮುಗ್ಗಟ್ಟು ಎದುರಾದರೆ ಆತನಿಗೆ ನೆರವಾಗುವುದಾಗಿ ಎಸ್ಎಚ್ಒ ತೆಹಝೀಜ್ ಖ್ವಾಜಿ ಹೇಳಿದ್ದಾರೆ. ಈ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.