ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆಕೆ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ.
ಆಕೆಯ ಆರ್ ಟಿ ಪಿ ಸಿ ಆರ್ ವರದಿ ಪಾಸಿಟಿವ್ ಬಂದಿದ್ದರೆ ಆಂಟಿಜನ್ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ಈಕೆ ಲಕ್ಷಣ ರಹಿತ ಕೊರೊನಾ ಸೋಂಕನ್ನ ಹೊಂದಿದ್ದಾಳೆ ಎಂದು ತ್ರಿಶೂರ್ನ ಡಿಎಂಓ ಡಾ. ಕೆ. ಜೆ. ರೀನಾ ಮಾಹಿತಿ ನೀಡಿದ್ರು.
ವಿದ್ಯಾಭ್ಯಾಸಕ್ಕಾಗಿ ಈಕೆ ದೆಹಲಿಗೆ ಪ್ರಯಾಣ ಬೆಳೆಸಬೇಕಾದ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಳು. ಆದರೆ ಆರ್ ಟಿ ಪಿ ಸಿ ಆರ್ ಪರೀಕ್ಷೆಯಲ್ಲಿ ಈಕೆಗೆ ಸೋಂಕಿರೋದು ದೃಢವಾಗಿದೆ. ಪ್ರಸ್ತುತ ಸೋಂಕಿತ ವಿದ್ಯಾರ್ಥಿನಿ ಮನೆಯಲ್ಲೇ ಇದ್ದು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ವರ್ಷ ಜನವರಿ 30ರಂದು ವುಹಾನ್ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದ ಈಕೆ ಕೊರೊನಾ ಸೋಂಕಿಗೆ ಒಳಗಾಗಿದ್ದಳು. ಸೆಮಿಸ್ಟರ್ ರಜೆಯ ಹಿನ್ನೆಲೆ ಭಾರತಕ್ಕೆ ಮರಳಿದ್ದ ಈಕೆ ದೇಶದ ಮೊದಲ ಕೊರೊನಾ ಸೋಂಕಿತೆ ಎನಿಸಿಕೊಂಡಿದ್ದಳು.
ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಾರಗಟ್ಟಲೇ ಚಿಕಿತ್ಸೆ ಪಡೆದ ಬಳಿಕ ಈಕೆ ಕೊರೊನಾ ಸೋಂಕಿನಿಂದ ಗುಣಮುಖಳಾಗಿದ್ದಳು. ಕಳೆದ ವರ್ಷ ಫೆಬ್ರವರಿ 20ರಂದು ಈಕೆಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.