ಭಾರತದಿಂದ ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್ಗಳನ್ನು ಸ್ವೀಕರಿಸಿದವರು ಅರಬ್ ರಾಷ್ಟ್ರಕ್ಕೆ ಬರಬಹುದು ಎಂದು ಈ ಹಿಂದೆ ಅಮಾನತು ಮಾಡಿದ್ದ ದೇಶಗಳ ಪೈಕಿ 12 ರಾಷ್ಟ್ರಗಳ ಪ್ರಜೆಗಳಿಗೆ ಅನುಮತಿ ನೀಡಿದೆ. ವಿಶೇಷ ಅಂದರೆ ಈ ಹಿಂದೆ ಅರಬ್ ಪ್ರಯಾಣದಿಂದ ನಿರ್ಬಂಧಕ್ಕೆ ಒಳಪಟ್ಟಿದ್ದ ಭಾರತಕ್ಕೆ ಕೂಡ ಅನುಮತಿ ನೀಡಲಾಗಿದೆ.
ದುಬೈನಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಕಳೆದ 1 ವರ್ಷದಿಂದ ಮುಂದೂಡಲ್ಪಟ್ಟಿದ್ದ ದುಬೈ ವರ್ಲ್ಡ್ ಎಕ್ಸಪೋ 2020 ಅಕ್ಟೋಬರ್ 1ರಂದು ನಡೆಯಲಿದೆ. ಇದೇ ಕಾರಣಕ್ಕೆ ನಾಳೆಯಿಂದ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಅರಬ್ ರಾಷ್ಟ್ರ ಬಂದಿದೆ.
ಅರಬ್ ರಾಷ್ಟ್ರಗಳ ಬ್ಯುಸಿನೆಸ್ ಹಬ್ಗಳಲ್ಲಿ ಒಂದಾದ ದುಬೈ 1 ವರ್ಷಗಳ ಕಾಯುವಿಕೆಯ ಬಳಿಕ ಇದೀಗ ವರ್ಲ್ಡ್ ಎಕ್ಸ್ಪೋಗೆ ಮುಂದಾಗಿದೆ. ಪ್ರಾದೇಶಿಕ ವ್ಯಾಪಾರ ಹಾಗೂ ಪ್ರವಾಸೋದ್ಯಮ ಕೇಂದ್ರವಾದ ದುಬೈ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ನಡೆಸುತ್ತದೆ.
ಎಕ್ಸ್ಪೋ ಸಮಯದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘಟಕರು ಹೇಳಿದ್ದಾರೆ.
ಭಾರತವನ್ನು ಹೊರತುಪಡಿಸಿ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಅನುಮತಿ ಪಡೆದ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಕಾಂಗೋ , ಉಗಾಂಡಾ, ಸಿಯೆರಾ ಲಿಯೋನ್, ಲೈಬೀರಿಯಾ, ದಕ್ಷಿಣ ಆಫ್ರಿಕಾ, ನೈಜಿರೀಯಾ ಹಾಗೂ ಅಫ್ಘಾನಿಸ್ತಾನ ಸೇರಿದೆ.