ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯ ವ್ಯಕ್ತಿಗಳು ಇಟ್ಟಿರುವ ಹಣದ ಮೊತ್ತ ಏರಿಕೆಯಾಗಿದೆ ಎಂಬ ಹೇಳಿಕೆಯನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ.
ಶುಕ್ರವಾರ ಸ್ವಿಡ್ಜರ್ಲೆಂಡ್ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯ ವ್ಯಕ್ತಿಗಳು, ಸಂಸ್ಥೆಗಳು ಇಟ್ಟಿರುವ ಹಣ 20,700 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿತ್ತು. 2019ರಲ್ಲಿ 6625 ಕೋಟಿ ರೂಪಾಯಿ ಇದ್ದ ಮೊತ್ತ 2020ರ ಅಂತ್ಯದ ವೇಳೆಗೆ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಸ್ವಿಸ್ ಬ್ಯಾಂಕ್ ಒದಗಿಸಿದ ಮಾಹಿತಿಯ ಪ್ರಕಾರ ತಿಳಿದುಬಂದಿತ್ತು.
ಆದರೆ ಸ್ವಿಜರ್ಲೆಂಡ್ನಲ್ಲಿ ಭಾರತೀಯರ ಕಪ್ಪು ಹಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ನೀಡಲಾದ ದತ್ತಾಂಶಗಳನ್ನ ಕೇಂದ್ರ ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. ಸ್ವಿಸ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಧಿಕೃತ ದತ್ತಾಂಶವು ಭಾರೀ ಚರ್ಚೆಗೆ ಗ್ರಾಸವಾಗಿರುವ ಭಾರತೀಯರು ಹೊಂದಿರುವ ಕಪ್ಪು ಹಣದ ಪ್ರಮಾಣವನ್ನ ಸೂಚಿಸೋದಿಲ್ಲ ಎಂದು ಸಚಿವಾಲಯ ಹೇಳಿದೆ.
ಸ್ವಿಸ್ ಬ್ಯಾಂಕ್ ಬಿಡುಗಡೆ ಮಾಡಿರುವ ಈ ಅಂಕಿ ಅಂಶಗಳಲ್ಲಿ ಮೂರನೇ ರಾಷ್ಟ್ರದ ಹೆಸರಿನಲ್ಲಿ ಭಾರತೀಯರು, ಎನ್ಆರ್ಐಗಳು ಹಾಗೂ ಇತರರು ಹೊಂದಿರುವ ಹಣದ ಬಗ್ಗೆ ಮಾಹಿತಿ ಒಳಗೊಂಡಿಲ್ಲ ಎಂದು ಸಚಿವಾಲಯ ಹೇಳಿದೆ.
2019ರ ಅಂತ್ಯದಿಂದ ಗ್ರಾಹಕರಿಂದ ಬರಬೇಕಾದ ಇತರೆ ಮೊತ್ತಗಳಲ್ಲಿ ಏರಿಕೆ ಉಂಟಾಗಿದೆ. ಇವೆಲ್ಲವೂ ಬಾಂಡ್, ಸೆಕ್ಯೂರಿಟಿ ರೂಪದಲ್ಲಿದೆ. ಗ್ರಾಹಕರ ಠೇವಣಿಯು 2019ರ ಅಂತ್ಯದಿಂದ ಕುಸಿತ ಕಂಡಿದೆ.
ಆದರೆ ಭಾರತೀಯ ಕಂಪನಿಗಳು ಹೆಚ್ಚಾದ ವ್ಯಾಪಾರ ವ್ಯವಹಾರ ಹಾಗೂ ಭಾರತ ಮತ್ತು ಸ್ವಿಸ್ ಬ್ಯಾಂಕ್ ಶಾಖೆಗಳ ವ್ಯವಹಾರದಿಂದಾಗಿ ಠೇವಣಿಯಲ್ಲಿ ಏರಿಕೆ ಆಗಿರಬಹುದು. ಹೀಗಾಗಿ ಭಾರತೀಯರು ಸ್ವಿಸ್ ಬ್ಯಾಂಕ್ ಇಟ್ಟಿರುವ ಹಣದ ಮೊತ್ತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಹೇಳಿಕೆ ಸಂಬಂಧ ಅಂಕಿ ಅಂಶಗಳನ್ನ ಒದಗಿಸುವಂತೆ ಸ್ವಿಸ್ ಬ್ಯಾಂಕ್ ಬಳಿ ಕೇಂದ್ರ ಸಚಿವಾಲಯ ಮನವಿ ಮಾಡಿದೆ.