ಅಪ್ಘಾನಿಸ್ತಾನವು ತಾಲಿಬಾನ್ ಆಡಳಿತದಲ್ಲಿ ನರಕವೇ ಆಗಿದೆ. ಅಲ್ಲಿ ಸಂಕಷ್ಟ ಪಡುತ್ತಿರುವವರ ಪಾಲಿಗೆ ಭಾರತದ ಸಹೋದರಿಯರು ಸಹಾಯ ಹಸ್ತ ಚಾಚಿದ್ದಾರೆ. ಅಫ್ಘಾನಿಸ್ತಾನದಿಂದ 92 ಮಂದಿ ನಿರಾಶ್ರಿತರು, ಐದು ನಾಯಿಗಳು ಹಾಗೂ 1 ಬೆಕ್ಕನ್ನು ಸ್ಥಳಾಂತರಿಸಲು ಈ ಸಹೋದರಿಯರು ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಇವರೆಲ್ಲರನ್ನು ಇಸ್ಲಾಮಾಬಾದ್ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು ಮೂರನೇ ದೇಶಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ತೆರಳಲಿದ್ದಾರೆ.
ಜಿಬ್ರಾಲ್ಟರ್ನಲ್ಲಿ ಓರ್ವ ಸಹೋದರಿ ವಾಸವಾಗಿದ್ದರೆ ಮತ್ತೊಬ್ಬ ಸಹೋದರಿ ಭಾರತದಲ್ಲಿ ನೆಲೆಸಿದ್ದಾರೆ. ವಿಭಜನೆಯ ಸಂದರ್ಭದಲ್ಲಿ ಇವರಿಬ್ಬರ ಮೃತ ತಾಯಿ ಪಾಕಿಸ್ತಾನದಿಂದ ಭಾರತಕ್ಕೆ ಪಲಾಯನ ಮಾಡಿದ್ದರು. ಹೀಗಾಗಿ ಇವರಿಗೆ ಅಪ್ಘನ್ನ ಜನರು ಪ್ರಸ್ತುತ ಎಷ್ಟು ಸಂಕಷ್ಟದಲ್ಲಿ ಇರಬಹುದು ಎಂಬ ಅರಿವಿದೆ.
ಅಪ್ಘನ್ನಲ್ಲಿ ನೆಲೆಸಿದ ಜನರನ್ನು ಸ್ಥಳಾಂತರಿಸಲು ಈ ಸಹೋದರಿಯರು 3 ಕೋಟಿಗೂ ಅಧಿಕ ಮೊತ್ತ ಖರ್ಚು ಮಾಡಿದ್ದಾರೆ. ಇದಕ್ಕೆ ಅನೇಕರು ದೇಣಿಗೆ ರೂಪದಲ್ಲಿ ಸಹಾಯ ಮಾಡಿದ್ದಾರೆ. ಆದರೆ 1.5 ಕೋಟಿ ರೂಪಾಯಿ ಹಣವನ್ನು ಈ ಸಹೋದರಿಯರು ವೈಯಕ್ತಿಕ ರೂಪದಲ್ಲಿ ನೀಡಿದ್ದಾರೆ.
ಆಪರೇಷನ್ ಮ್ಯಾಜಿಕ್ ಕಾರ್ಪೆಟ್ ಎಂಬ ಹೆಸರಿನಲ್ಲಿ 30 ಮಹಿಳೆಯರು, 32 ಮಕ್ಕಳು ಹಾಗೂ ಆರು ಪ್ರಾಣಿಗಳನ್ನು ಕಾಬೂಲ್ನಿಂದ ಇಸ್ಲಾಮಾಬಾದ್ಗೆ ಸ್ಥಳಾಂತರಿಸಲಾಗಿದೆ. ಈ ಸ್ಥಳಾಂತರ ಕಾರ್ಯದಲ್ಲಿ 90 ವರ್ಷದ ಮಹಿಳೆ ಕೂಡ ಭಾಗಿಯಾಗಿದ್ದಾರೆ. ಹಾಗೂ ಓರ್ವ ಮಹಿಳೆ ಈ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.