ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೆರೆ ರಾಷ್ಟ್ರ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ. ಅಲ್ಲಿನ ಪೊಲೀಸರ ಬಳಕೆಗಾಗಿ 125 SUV ಗಳನ್ನು ಹಸ್ತಾಂತರಿಸಲಾಗಿದೆ.
‘ಲೈನ್ ಆಫ್ ಕ್ರೆಡಿಟ್’ ಅಡಿಯಲ್ಲಿ ಒಟ್ಟು 500 ಅತ್ಯಾಧುನಿಕ SUV ಗಳನ್ನು ನೀಡುವ ಸಲುವಾಗಿ ಈ ವರ್ಷದ ಆರಂಭದಲ್ಲಿ ಸಹಿ ಹಾಕಲಾಗಿದ್ದು, ಈಗ 125 ವಾಹನಗಳನ್ನು ಕಳುಹಿಸಲಾಗಿದೆ.
ತನ್ನ ನೆರೆ ರಾಷ್ಟ್ರಗಳಿಗೆ ನೆರವು ನೀಡುವ ಆದ್ಯತೆ ನೀತಿ ಅನ್ವಯ ಭಾರತ ಈ ತೀರ್ಮಾನ ಕೈಗೊಂಡಿದ್ದು, ಉಳಿದ ವಾಹನಗಳನ್ನು ಶೀಘ್ರದಲ್ಲೇ ಕಳಿಸಲಾಗುತ್ತದೆ ಎಂದು ಶ್ರೀಲಂಕಾದ ಭಾರತೀಯ ಹೈ ಕಮಿಷನರ್ ಗೋಪಾಲ್ ಬಾಗ್ಲೆ ತಿಳಿಸಿದ್ದಾರೆ.