ಮಧ್ಯ ಪ್ರದೇಶದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಲೇ ಇದ್ದು ರಾಜ್ಯದಲ್ಲಿ ಏಪ್ರಿಲ್ 30ರವರೆಗೆ ಲಾಕ್ಡೌನ್ ಹೇರಲಾಗಿದೆ. ಇದರ ಜೊತೆಯಲ್ಲಿ ಕೊರೊನಾ ವೈರಸ್ನಿಂದ ಜನರನ್ನ ಬಚಾವು ಮಾಡೋಕೆ ಲಸಿಕೆ ಪ್ರಯೋಗವನ್ನೂ ಮಾಡಲಾಗ್ತಿದೆ. ಆದರೆ ಸಿವ್ನಿ ಜಿಲ್ಲೆಯ ಗ್ರಾಮವೊಂದರಲ್ಲಿ ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಗೇ ಗ್ರಾಮಸ್ಥರು ನಿರ್ಬಂಧ ಹೇರಿದ್ದಾರೆ.
ಗೋರಖ್ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆರೋಗ್ಯ ಸಿಬ್ಬಂದಿ ಇಲ್ಲಿ ಭೇಟಿ ನೀಡುತ್ತಿದ್ದಂತೆಯೇ ದೊಣ್ಣೆ ಹಿಡಿದು ಬಂದ ಆರೇಳು ಮಂದಿ ಮಹಿಳೆಯರು ನಾವು ಲಸಿಕೆಯನ್ನ ಹಾಕಿಸಿಕೊಳ್ಳೋದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಈ ಸ್ಥಳದಲ್ಲಿ ಹಾಜರಿದ್ದ ಪಂಚಾಯತ್ ನೋಡಲ್ ಅಧಿಕಾರಿ ಎದುರಿಗೇ ಮಹಿಳೆಯರು ಈ ರೀತಿ ವರ್ತಿಸಿದ್ದಾರೆ.
ಈ ಗ್ರಾಮದಲ್ಲಿ ಕೊರೊನಾ ಲಸಿಕೆ ವಿಚಾರವಾಗಿ ಸಾಕಷ್ಟು ತಪ್ಪು ಅಭಿಪ್ರಾಯವಿದೆ. ಈ ಗ್ರಾಮದಲ್ಲಿ ಲಸಿಕೆ ಕಾರ್ಯಕ್ರಮ ನಡೆಸಿ ಜಿಲ್ಲಾ ಪಂಚಾಯತ್ ಸಿಇಓ ನೀಡಿದ ನೋಟಿಸ್ ಆಧರಿಸಿ ಗ್ರಾಮಕ್ಕೆ ಬಂದ ಆರೋಗ್ಯ ಸಿಬ್ಬಂದಿಗೆ ದೊಣ್ಣೆಯಿಂದ ಸ್ವಾಗತ ದೊರಕಿದೆ. ಇನ್ನು ಮಹಿಳೆಯರು ದೊಣ್ಣೆ ಹಿಡಿದು ಅಧಿಕಾರಿಗಳಿಗೆ ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ಮಹಿಳೆಯರನ್ನ ಒಪ್ಪಿಸುವಲ್ಲಿ ಆರೋಗ್ಯ ಸಿಬ್ಬಂದಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಜನರು ಕೊರೊನಾ ವೈರಸ್ ಬಗ್ಗೆ ಭಯ ಹೊಂದಿದ್ದಾರೆ ಆದರೆ ಲಸಿಕೆ ವಿಚಾರದಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಹೊಂದಿರೋದೇ ಈ ಅಚಾತುರ್ಯಕ್ಕೆ ಕಾರಣವಾಗಿದೆ.