ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವೆ ಎಂದಿದ್ದ ನನ್ನ ಹೇಳಿಕೆಯನ್ನ ಕಾಂಗ್ರೆಸ್ ಹಾಗೂ ಎಸ್ಪಿ ದುರುಪಯೋಗ ಪಡಿಸಿಕೊಳ್ಳುತ್ತಿವೆ ಅಂತಾ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ. ನಮ್ಮ ಹಾಗೂ ಬಿಜೆಪಿಯ ಸಿದ್ದಾಂತ ಪರಸ್ಪರ ವಿರುದ್ಧವಾಗಿದ್ದು ಇಂತಹ ಪಕ್ಷದೊಂದಿಗಿನ ಮೈತ್ರಿಗಿಂತ ರಾಜಕೀಯ ನಿವೃತ್ತಿ ಲೇಸು ಅಂತಾ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನ ಸೋಲಿಸಲು ನಾವು ಬಿಜೆಪಿ ಸೇರಿದಂತೆ ಯಾವುದೇ ಬಲಿಷ್ಠ ಅಭ್ಯರ್ಥಿಗೆ ಮತಹಾಕುತ್ತೇವೆ ಅಂತಾ ಕಳೆದ ವಾರ ಮಾಯಾವತಿ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯನ್ನ ತಪ್ಪಾಗಿ ವ್ಯಾಖ್ಯಾನಿಸಿರುವ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯವನ್ನ ನಮ್ಮ ಪಕ್ಷದಿಂದ ದೂರ ಮಾಡಲು ಯತ್ನಿಸುತ್ತಿದೆ ಅಂತಾ ಕಿಡಿಕಾರಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಭವಿಷ್ಯದಲ್ಲಿ ಚುನಾವಣೆ ಎದುರಿಸುವ ಇರಾದೆ ಬಿಎಸ್ಪಿಗೆ ಇಲ್ಲ. ಎಲ್ಲಾ ಧರ್ಮವೂ ಒಂದೇ ಅನ್ನೋದು ನಮ್ಮ ಪಕ್ಷದ ಸಿದ್ಧಾಂತವಾಗಿದೆ. ಹೀಗಿರುವಾಗಿ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತೇ ಇಲ್ಲ. ಇದರ ಬದಲು ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ. ಆದರೆ ಭವಿಷ್ಯ ಎಂಎಲ್ಸಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನ ಸೋಲಿಸಲು ಯಾವುದೇ ಅಭ್ಯರ್ಥಿಗೆ ಮತ ಹಾಕಲು ನಾವು ಸಿದ್ಧ ಅಂತಾ ಮತ್ತೊಮ್ಮೆ ತಮ್ಮ ಹೇಳಿಕೆಯನ್ನ ಪುನರುಚ್ಚರಿಸಿದ್ದಾರೆ.