ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನ ಸೋಲಿಸಲು ನಮ್ಮ ಪಕ್ಷ ಬಿಜೆಪಿ ಅಥವಾ ಇತರೆ ಯಾವುದೇ ಬಲಿಷ್ಠ ಅಭ್ಯರ್ಥಿಗೆ ಮತ ಹಾಕಲು ತಯಾರಿದೆ ಅಂತಾ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಗುಡುಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಶಾಸಕರ ಪಕ್ಷಾಂತರ ವದಂತಿ ವಿಚಾರವಾಗಿ ಮಾತನಾಡಿದ ಅವ್ರು ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನ ಸೋಲಿಸಲು ಶಕ್ತವಾಗಿರುವ ಯಾವುದೇ ಪಕ್ಷದ ಅಭ್ಯರ್ಥಿಗೆ ನಮ್ಮ ಪಕ್ಷ ಮತಹಾಕಲಿದೆ ಅಂತಾ ಹೇಳಿದ್ದಾರೆ.
ಬಿಎಸ್ಪಿಯ ಆರು ಶಾಸಕರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರನ್ನ ಬುಧವಾರ ಭೇಟಿ ಮಾಡಿದ್ರು. ಇದಾದ ಬಳಿಕ ಈ ಶಾಸಕರು ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹ ಉತ್ತರ ಪ್ರದೇಶ ರಾಜಕೀಯದಲ್ಲಿ ಬಲವಾಗಿ ಹಬ್ಬಿತ್ತು. ಈ ರಾಜಕೀಯ ಬೆಳವಣಿಗೆಯಿಂದ ಕೆಂಡಾಮಂಡಲರಾಗಿರುವ ಮಾಯಾವತಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.