
ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ.
ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ ವಿಡಿಯೋ ಮತ್ತೆ ವೈರಲ್ ಆಗಿದೆ. ಮುಳುಗಿ ಹೋಗುವ ಭೀತಿಯಲ್ಲಿ ನದಿಯ ಹರಿವಿನೊಂದಿಗೆ ಅಸಹಾಯಕನಾಗಿ ಕೊಚ್ಚಿ ಹೋಗುತ್ತಿರುವ ಮಾನವನೊಬ್ಬನನ್ನು ಕಂಡ ಆನೆ ಮರಿಯೊಂದು ಆತನನ್ನು ರಕ್ಷಿಸಲು ಮುಂದಾಗುತ್ತದೆ.
ಖುದ್ದು ತಾನೇ ಮುಳುಗಿ ಹೋಗುವಷ್ಟು ಆಳವನ್ನೂ ದಾಟಿಕೊಂಡು ಹೋದ ಆನೆಮರಿ, ತನ್ನ ಕಾಲುಗಳು ಹಾಗೂ ಸೊಂಡಿಲನ್ನು ಬಳಸಿ ಆತನನ್ನು ಸುರಕ್ಷಿತ ತೀರಕ್ಕೆ ಸಾಗಿಸಿದೆ.
ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಬಿಎಸ್‌ಇ ಸಿಇಓ ಆಶಿಶ್ ಚೌಹಾಣ್, “ಇಷ್ಟು ಹೃದಯವಂತ ಪ್ರಾಣಿಗಳ ಕರುಣೆಗೆ ನಾವು ನಿಜಕ್ಕೂ ಅರ್ಹರೇ?” ಎಂದು ಬರೆದು ಟ್ವೀಟ್ ಮಾಡಿದ್ದಾರೆ.