ಹಳಿಗಳ ಮೇಲೆ ದನಗಳು ನಿಂತಿದ್ದನ್ನ ಕಂಡ ಕೊಯಂಬತ್ತೂರು – ಹಿಸಾರ್ ಎಕ್ಸ್ಪ್ರೆಸ್ ರೈಲು ಚಾಲಕ ತಕ್ಷಣವೇ ಬ್ರೇಕ್ ಹಾಕುವ ಮೂಲಕ ಹಸುಗಳನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಪಾಲಕ್ಕಡ್ ನಿಲ್ದಾಣದಿಂದ ಹೊರಟಿದ್ದ ರೈಲು ಇದಾಗಿತ್ತು.
ಪತ್ರಕರ್ತರೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಹಳಿಗಳ ಮೇಲೆ ನಿಂತಿದ್ದ ಜಾನುವಾರುಗಳು ಅಲ್ಲಿಂದ ಹಾದು ಹೋಗುವವರೆಗೂ ಚಾಲಕ ರೈಲನ್ನ ನಿಲ್ಲಿಸಿಕೊಂಡಿದ್ದರು. ರೈಲು ಚಾಲಕ ಮೊದಲು ಹಾರ್ನ್ ಹಾಕುವ ಮೂಲಕ ಜಾನುವಾರುಗಳನ್ನ ಹಳಿಯಿಂದ ಕದಲಿಸಲು ಯತ್ನಿಸಿದ್ದರು. ಆದರೆ ಇದು ಸಾಧ್ಯವಾಗದೇ ಇದ್ದಾಗ ರೈಲನ್ನೇ ನಿಲ್ಲಿಸಿ ಕೆಳಗಿಳಿದು ಬಂದು ಹಸುಗಳನ್ನ ಹಳಿಯಿಂದ ಓಡಿಸಿ ಬಳಿಕ ರೈಲನ್ನ ಚಲಾಯಿಸಿದ್ದಾರೆ.
ಪತ್ರಕರ್ತ ರಾಜೇಶ್ ಎಂಬವರು ಈ ಸಂಪೂರ್ಣ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ನಾನು ಕೂಡ ಹಳಿಯನ್ನ ದಾಟುವವನಿದ್ದೆ. ಈ ವೇಳೆ ನನಗೆ ಈ ಅಮೂಲ್ಯವಾದ ದೃಶ್ಯವನ್ನ ನೋಡಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು , ರೈಲು ಕಡಿಮೆ ವೇಗದಲ್ಲಿ ಚಲಿಸ್ತಾ ಇದ್ದಿದ್ದರಿಂದ ಚಾಲಕನಿಗೆ ಬ್ರೇಕ್ ಹಾಕೋಕೆ ಸಾಧ್ಯವಾಯ್ತು. ನಮ್ಮ ಇಲಾಖೆ ಸಿಬ್ಬಂದಿಯ ಕರುಣೆಯನ್ನ ಕಂಡು ಖುಷಿಯಾಗಿದೆ. ಆದರೆ ರೈಲುಗಳು ಅತಿಯಾದ ವೇಗದಲ್ಲಿ ಇದ್ದಾಗ ಇಂತಹ ಅವಘಡಗಳನ್ನ ತಪ್ಪಿಸೋಕೆ ಚಾಲಕರ ಕೈಯಿಂದಲೂ ಸಾಧ್ಯವಾಗೋದಿಲ್ಲ ಎಂದು ಹೇಳಿದ್ರು.