1971ರ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ ನಿಜವಾದ ಹೀರೋಗಳಿಗೆ ಗೌರವ ಸಲ್ಲಿಸಲು ಮುಂದಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು 180 ಕಿಮೀ ಮೆಗಾ ರಿಲೇ ರೇಸ್‌ನಲ್ಲಿ ಓಡಿದ್ದಾರೆ. ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಅಂತಾರಾಷ್ಟ್ರೀಯ ಗಡಿಯ ಬಳಿ ನಡೆದ ಈ ರಿಲೇ ರೇಸ್ ಅನ್ನು 11 ಗಂಟೆಗಳ ಅವಧಿಯಲ್ಲಿ ಮುಗಿಸಿದ್ದಾರೆ ಯೋಧರು.
ಈ ರಿಲೇಯ ವಿಡಿಯೋ ಟ್ವಿಟ್ ಮಾಡಿದ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, “1971ರ ಯುದ್ಧದ ಹೀರೋಗಳಿಗೆ ಬಿಎಸ್‌ಎಫ್ ಸೂಕ್ತ ಗೌರವ ಕೊಟ್ಟಿದೆ. ಅಂತಾರಾಷ್ಟ್ರೀಯ ಗಡಿಯ ಬಳಿ 11 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ 180 ಕಿಮೀಗಳನ್ನು 930 ಬಿಎಸ್‌ಎಫ್ ಬಾಯ್ಸ್ ಹಾಗೂ ಗರ್ಲ್ಸ್ ಓಡಿ ಮುಗಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನವನ್ನು ಇಬ್ಭಾಗವಾಗಿಸಿದ 1971ರ ಯುದ್ಧವನ್ನು ಬರೀ 16 ದಿನಗಳಲ್ಲಿ ಗೆದ್ದ ಭಾರತೀಯ ಸಶಸ್ತ್ರ ಪಡೆಗಳ ಪರಾಕ್ರಮವನ್ನು ಸ್ಮರಿಸುತ್ತಾ ಪ್ರತಿ ವರ್ಷದ ಡಿಸೆಂಬರ್ 16ರಂದು ವಿಜಯ್ ದಿವಸ್ ಆಚರಿಸಲಾಗುತ್ತದೆ.