ಜೀನ್ಸ್ ಧರಿಸಲು ಹಾಗೂ ನೃತ್ಯ ಮಾಡಲು ನಿರಾಕರಿಸಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಬಳಿಕವೂ ಸುಮ್ಮನಾಗದ ಪತಿ ಮಾವನ ಮನೆಗೆ ತೆರಳಿ ಬೆಂಕಿ ಹಚ್ಚಿಕ್ಕೊಂಡಿದ್ದಾನೆ. ಆತನ ಅಳಿಯಂದಿರು ಬೆಂಕಿ ಆರಿಸಿ ವ್ಯಕ್ತಿಯನ್ನ ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ .
ನ್ಯೂ ಇಸ್ಮಾಯಿಲ್ ನಗರದ ಲಿಸಾರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ನ್ಯೂ ಇಸ್ಮಾಯಿಲ್ ನಗರ ನಿವಾಸಿಯಾದ ಅಮಿರುದ್ದೀನ್ 8 ವರ್ಷಗಳ ಹಿಂದೆ ತಮ್ಮ ಮಗಳನ್ನ ಪಿಲಖುವಾ ನಿವಾಸಿ ಅನಸ್ ಜೊತೆ ವಿವಾಹ ಮಾಡಿದ್ದರು. ಅನಸ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿ ಬಳಿ ಹಾಡು ಹೇಳು, ಡ್ಯಾನ್ಸ್ ಮಾಡು ಅಂತಾ ಈತ ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ.
ಪತಿಯ ಕಾಟದಿಂದ ಬೇಸತ್ತಿದ್ದ ಪತ್ನಿ ಸ್ಥಳೀಯ ಪಂಚಾಯತ್ದಲ್ಲಿ ಆರೋಪ ಮಾಡಿದ್ದಳು. ಆದರೆ ಯಾವುದೇ ಪರಿಹಾರ ದೊರೆತಿರಲಿಲ್ಲ. ಎರಡು ದಿನಗಳ ಹಿಂದೆ ಅನಸ್ ತನ್ನ ಪತ್ನಿಗೆ ತಲಾಕ್ ನೀಡಿದ್ದ. ಬಳಿಕ ಪತ್ನಿಯ ತಂದೆಯ ನಿವಾಸಕ್ಕೆ ಆಗಮಿಸಿದ ಅನಸ್ ಬೆಂಕಿ ಹಚ್ಚಿಕ್ಕೊಂಡಿದ್ದಾನೆ. ಭಾರತೀಯ ಕಾನೂನಿನ ಪ್ರಕಾರ ದೇಶದಲ್ಲಿ ತ್ರಿವಳಿ ತಲಾಕ್ ಅಮಾನ್ಯವಾಗಿದೆ.