ಹಾಸಿಗೆಗಳನ್ನ ಹತ್ತಿಯಿಂದ ತಯಾರು ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಅಂಗಡಿಯಿಂದ ಹಾಸಿಗೆಯನ್ನ ತಂದಮೇಲೆ ಒಳಗೆ ಏನಿದೆ ಅಂತಾ ಪರಿಶೀಲನೆ ಮಾಡೋ ಗೋಜಿಗೆ ಯಾರ್ ತಾನೇ ಹೋಗ್ತಾರೆ. ಆದರೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದನ್ನ ನೋಡ್ತಿದ್ರೆ ಹೊಸ ಹಾಸಿಗೆಗಳನ್ನ ಹರಿದು ಒಳಗೆ ಏನಿದೆ ಎಂದು ನೋಡಬೇಕು ಅಂತಾ ಎನಿಸದೇ ಇರದು.
ಹಾಸಿಗೆ ತಯಾರಕ ಅಂಗಡಿಯೊಂದರಲ್ಲಿ ಹತ್ತಿಗಳನ್ನ ಹಾಕಿ ಹಾಸಿಗೆ ತಯಾರು ಮಾಡೋದ್ರ ಬದಲು ಬಳಕೆ ಮಾಡಿ ಬಿಸಾಡಿದ ಮಾಸ್ಕ್ಗಳನ್ನ ಹಾಕಲಾಗಿದೆ. ಈ ಸಂಬಂಧ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಹಾಗೂ ಈ ಕಚ್ಚಾ ವಸ್ತುಗಳನ್ನ ನಾಶ ಮಾಡಿದ್ದಾರೆ.
ಕುಸುಂಬಾ ಜಿಲ್ಲೆಯ ಹಾಸಿಗೆ ತಯಾರಕ ಕಾರ್ಖಾನೆಗೆ ಭೇಟಿ ನೀಡಿದ್ದ ವೇಳೆ ಹಾಸಿಗೆಯ ಒಳಗೆ ಬಳಕೆ ಮಾಡಿ ಬಿಟ್ಟ ಮಾಸ್ಕ್ಗಳನ್ನ ತುಂಬಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಸೂಪರಿಟೆಂಡೆಂಟ್ ಪೊಲೀಸ್ ಚಂದ್ರಕಾಂತ್ ಗವಾಲಿ ಮಾಹಿತಿ ನೀಡಿದ್ರು.
ಕಾರ್ಖಾನೆ ಮಾಲೀಕ ಅಮ್ಜದ್ ಅಹಮದ್ ಮನ್ಸೂರಿ ವಿರುದ್ಧ ಕೇಸ್ ದಾಖಲಾಗಿದೆ. ಈ ದಂಧೆಯಲ್ಲಿ ಇನ್ನೂ ಯಾರ್ಯಾರು ಇದಾರೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರಿದೆ ಎಂದು ಗವಾಲಿ ಹೇಳಿದ್ದಾರೆ.
ದೇಶದಲ್ಲಿ ಮಾಸ್ಕ್ ಉತ್ಪಾದನೆ ಪ್ರಮಾಣ ಮಾರ್ಚ್ 2020ರಿಂದ ದಿನಕ್ಕೆ 1.5 ಕೋಟಿ ಯುನಿಟ್ ಸಾಮರ್ಥ್ಯಕ್ಕೆ ಏರಿಕೆ ಕಂಡಿದೆ. ಇದರಿಂದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಹೊರೆ ಹೆಚ್ಚಾಗಿದೆ. ಕಳೆದ ವರ್ಷ ಜೂನ್ನಿಂದ ಸೆಪ್ಟೆಂಬರ್ವರೆಗೆ ಕೊರೊನಾ ಸಂಬಂಧಿ ವೈದ್ಯಕೀಯ ತ್ಯಾಜ್ಯದ ಪ್ರಮಾಣ ಬರೋಬ್ಬರಿ 18 ಸಾವಿರ ಟನ್ ಆಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.