ಹೆಸರಿನಲ್ಲಾದ ಸಣ್ಣ ಬದಲಾವಣೆಯಿಂದಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಕೋರ್ಟ್ನಿಂದ ಜಾಮೀನು ಸಿಕ್ಕ ಬಳಿಕವೂ 8 ತಿಂಗಳುಗಳ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಬಂದೊದಗಿದೆ.
ವಿನೋದ್ ಕುಮಾರ್ ಬರುವಾರ್ ಎಂಬ ಆರೋಪಿ ಕೋರ್ಟ್ನಿಂದ ಜಾಮೀನನ್ನ ಪಡೆದಿದ್ದರು. ಆದರೆ ಜಾಮೀನು ಆದೇಶ ಪತ್ರದಲ್ಲಿ ವಿನೋದ್ ಬರುವಾರ್ ಎಂದಷ್ಟೇ ನಮೂದಾಗಿದ್ದರಿಂದ ಈ ಸಮಸ್ಯೆ ಬಂದೊದಗಿದೆ.
ವಿನೋದ್ ಜಾಮೀನಿಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಪ್ರಿಲ್ 9ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶನ ನೀಡಿತ್ತು. ಆದರೆ ಚಾರ್ಜ್ಶೀಟ್ ಹಾಗೂ ಜಾಮೀನು ಪ್ರತಿಯಲ್ಲಿ ಹೆಸರು ಬದಲಾವಣೆ ಹಿನ್ನೆಲೆ ಜೈಲು ಅಧೀಕ್ಷಕರು ಬಿಡುಗಡೆ ಮಾಡಲು ಒಪ್ಪಿಗೆ ನೀಡಿಲ್ಲ.
ಈ ಬಗ್ಗೆ ಸಲ್ಲಿಕೆಯಾದ ಅರ್ಜಿ ಬಗ್ಗೆಯೂ ವಿಚಾರಣೆ ನಡೆಸಿದ ಹೈಕೋರ್ಟ್ ಹೆಸರು ತಪ್ಪಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಆರೋಪಿಯನ್ನ ಜೈಲಿನಲ್ಲಿ ಇರಿಸಿಕೊಂಡ ಬಗ್ಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಿ ಸಿದ್ಧಾರ್ಥ ನಗರ ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಸಿಂಗ್ರನ್ನ ವಿಚಾರಣೆಗೆ ಹಾಜರುಪಡಿಸಿತ್ತು. ವಿಚಾರಣೆಗೆ ಹಾಜರಾದ ರಾಕೇಶ್ ಸಿಂಗ್, ಡಿಸೆಂಬರ್ 8ರಂದು ವಿನೋದ್ರನ್ನ ಬಿಡುಗಡೆ ಮಾಡಿರುವ ಬಗ್ಗೆ ದಾಖಲೆ ಸಲ್ಲಿಸಿದ್ದಾರೆ.