ಕಾಲೇಜು ವಿದ್ಯಾರ್ಥಿಯೊಬ್ಬ ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿ ಮೇಲೆ ಫೈರಿಂಗ್ ನಡೆಸಿದ್ದು ಮಾತ್ರವಲ್ಲದೇ ವಿದ್ಯಾರ್ಥಿನಿಯೊಬ್ಬಳ ಮನೆಗೆ ನುಗ್ಗಿ ಆಕೆಯನ್ನ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶ ಬುಂದೇರ್ ಖಂಡ್ ಕಾಲೇಜಿನಲ್ಲಿ ನಡೆದಿದೆ.
ಸಂತ್ರಸ್ತರು ಹಾಗೂ ಆರೋಪಿ ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ತ್ರಿಕೋನ ಪ್ರೇಮವೇ ಈ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಕೃತಿಕಾ ತ್ರಿಪಾಠಿ ಎಂಬ ವಿದ್ಯಾರ್ಥಿನಿಯನ್ನ ಚಾಣಕ್ಯಾಪುರಿ ಮನೆಯಲ್ಲಿ ಕೊಲೆ ಮಾಡಲಾಗಿದೆ. ಹಾಗೂ ತಲೆಯ ಹಿಂಭಾಗಕ್ಕೆ ಗುಂಡೇಟು ತಿಂದಿರುವ ಹುಕುಮ್ಚಂದ್ ಗುರ್ಜರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಪಿ. ಮಾಹಿತಿ ನೀಡಿದ್ದಾರೆ.
ಆರೋಪಿ ಮಂಥನ್ ಸಿಂಗ್ ಸೇಂಗಾರ್ ಎಂಬಾತನನ್ನ ಬಂಧಿಸಲಾಗಿದ್ದು ಆತನಿಂದ ಪಿಸ್ತೂಲ್ ಹಾಗೂ ಲೈವ್ ಕಾರ್ಟಿಜ್ಗಳನ್ನ ವಶಪಡಿಸಿಕೊಳ್ಳಲಾಗಿದೆ.
ತರಗತಿಯ ಒಳಗೆ ಗುರ್ಜರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮೊದಲು ಸೇಂಗಾರ್ ಬೋರ್ಡ್ ಮೇಲೆ ಹೃದಯದ ಚಿತ್ರ ಬಿಡಿಸಿ ‘ಮಂಥನ್ ಫಿನಿಶ್’ ಎಂದು ಬರೆದಿದ್ದ. ಇದನ್ನ ನೋಡಿದ ಪೊಲೀಸರು ಬಹುಶಃ ಇದು ತ್ರಿಕೋನ ಪ್ರೇಮ ಕತೆ ಇರಬಹುದೆಂದು ಅಂದಾಜಿಸಿದ್ದಾರೆ.