ಉತ್ತರ ಪ್ರದೇಶದ ಪಿಲಿಭಿತ್ ಎಪಿಎಂಸಿಯಲ್ಲಿ ವ್ಯಾಪಾರಿಗಳು, ರೈತರು ಬೆಳೆದ ಹೂಕೋಸುಗಳಿಗೆ ಕ್ಷುಲ್ಲಕ ದರ ನಿಗದಿ ಮಾಡಿದ್ದು ಇದರಿಂದ ಆಕ್ರೋಶಕ್ಕೊಳಗಾದ ರೈತ ತಾನು ಬೆಳೆದ 10 ಕ್ವಿಂಟಲ್ ಹೂಕೋಸುಗಳನ್ನ ರಸ್ತೆಗೆ ಎಸೆದಿದ್ದಾನೆ. ಮಾತ್ರವಲ್ಲದೇ ಅದನ್ನ ಉಚಿತವಾಗಿ ಎತ್ತುಕ್ಕೊಂಡು ಹೋಗಲು ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದ್ದಾನೆ.
ಜಹನಾಬಾದ್ ಪಟ್ಟಣದ ಮೊಹಮ್ಮದ್ ಸಲೀಂ ತಾವು ಬೆಳೆದ ಬೆಳೆಗೆ ಪ್ರತಿ ಕೆಜಿಗೆ 1 ರೂಪಾಯಿ ನೀಡುತ್ತೇನೆಂದು ವ್ಯಾಪಾರಿಗಳು ಹೇಳಿದ್ದರಿಂದ ಆಕ್ರೋಶಕ್ಕೆ ಒಳಗಾಗಿದ್ದಾರೆ. ಅದು ಎಪಿಎಂಸಿ ಒಳಕ್ಕೆ ತಮ್ಮ ಹೂಕೋಸು ಬೆಳೆ ತರಲು ಅವರು ಖರ್ಚು ಮಾಡಿದ ಸಾರಿಗೆ ವೆಚ್ಚಕ್ಕೆ ಸಮನಾಗಿತ್ತು.
ನಾನು ಅರ್ಧ ಎಕರೆ ಭೂಮಿಯನ್ನ ಹೊಂದಿದ್ದೇನೆ. ಈ ಜಮೀನಿನಲ್ಲಿ ನಾನು ಹೂಕೋಸು ಕೃಷಿ ಮಾಡಿದ್ದೆ. ಬೀಜ, ನೀರಾವರಿ ವ್ಯವಸ್ಥೆ, ರಸಗೊಬ್ಬರಗಳಿಗಾಗಿ ನಾನು ಸುಮಾರು 8 ಸಾವಿರ ರೂಪಾಯಿ ವ್ಯಯಿಸಿದ್ದೇನೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಹೂಕೋಸಿಗೆ 12 ರಿಂದ 14 ರೂಪಾಯಿ ಇದೆ. ಆದರೆ ನನಗೆ 1 ರೂಪಾಯಿ ಕೊಡೋದಾಗಿ ಹೇಳಿದ್ದಾರೆ. ಹೀಗಾಗಿ ನನಗೆ ಹೂಕೋಸುಗಳನ್ನ ಎಸೆಯೋದು ಬಿಟ್ಟು ಬೇರೆ ದಾರಿ ಕಾಣಲಿಲ್ಲ ಎಂದು ರೈತ ನೋವನ್ನ ತೋಡಿಕೊಂಡಿದ್ದಾನೆ .