ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ.
ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲೇ ಕೊರೋನಾ ಪಾಸಿಟೀವ್ ಬಂದಿದ್ದರಿಂದ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂತಹ ಲಕ್ಷಣಗಳೇನೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿದ್ದರೆ ಸಾಕೆಂದು ಕಳುಹಿಸಿಕೊಡಲಾಯಿತು. ದಿಲ್ಲಿಯಿಂದ ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಮಗುವನ್ನು ನೇರವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಂಧ್ರದ ರಾಜಾಮಹೇಂದ್ರವರಮ್ ಮೂಲದ ಈಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಸ ಪ್ರಭೇದದ ವೈರಾಣು ಪತ್ತೆಯಾಗಿದೆ.
ಯುಕೆಯಿಂದ ಆಗಮಿಸಿರುವ 1423 ಮಂದಿಯಲ್ಲಿ 1406 ಜನರನ್ನು ತಪಾಸಣೆಗೆ ಒಳಪಡಿಸಿದ್ದು, 12 ಜನರಲ್ಲಿ ಹೊಸ ತಳಿಯ ಕೊರೋನಾ ಕಾಣಿಸಿಕೊಂಡಿದೆ. ಇನ್ನೂ 17 ಜನರ ಪತ್ತೆ ಕಾರ್ಯ ನಡೆಯುತ್ತಿದ್ದು, ಬೇರಾರಿಗೂ ಹೊಸ ಪ್ರಭೇದದ ಸೋಂಕು ಹರಡಿಲ್ಲ ಎಂದು ಆರೋಗ್ಯ ಆಯುಕ್ತ ಕತಮ್ನೇನಿ ಭಾಸ್ಕರ್ ತಿಳಿಸಿದ್ದಾರೆ.