ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….! 18-05-2021 10:55AM IST / No Comments / Posted In: Corona, Corona Virus News, Latest News, India ಅದು ಏಪ್ರಿಲ್ 23 1997. ಮೀರತ್ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್ ರಾಮ್ಪಾಲ್ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಪುಟ್ಟ ಕಂದಮ್ಮಗಳಿಗೆ ದಂಪತಿ ಜೋಫರ್ಡ್ ಹಾಗೂ ರಾರ್ಫಡ್ ಎಂದು ನಾಮಕರಣವನ್ನ ಮಾಡಲಾಗಿದ್ದು ಬೆಳೆದು ದೊಡ್ಡವರಾಗಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಮಕ್ಕಳು ಹೈದಾರಾಬಾದ್ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು. ಆದರೆ ಇವರಿಬ್ಬರ ಬಾಳಲ್ಲಿ ವಿಧಿಯ ಲೆಕ್ಕಾಚಾರ ಬೇರೆಯದ್ದೇ ಇತ್ತು. ಏಪ್ರಿಲ್ 24ರಂದು ಇಬ್ಬರೂ ಸಹೋದರರಿಗೆ ಜ್ವರ ಕಾಣಿಸಿಕೊಂಡಿದೆ. ಕೋವಿಡ್ನಿಂದ ಬಳಲುತ್ತಿದ್ದ ಈ ಅವಳಿ ಸಹೋದರರು ಒಂದೇ ದಿನ ಅಸುನೀಗಿದ್ದಾರೆ. ಚಿಕ್ಕಂದಿನಿಂದಲೂ ಏನೇ ಕೆಲಸ ಮಾಡೋದಾದರೂ ಒಟ್ಟಿಗೆ ಮಾಡುತ್ತಿದ್ದ ಈ ಅಣ್ಣ – ತಮ್ಮ ಇದೀಗ ಸಾವಿನ ಮನೆಗೂ ಒಂದಾಗಿಯೇ ಹೋಗಿದ್ದಾರೆ. ಅವರೆಂದಿಗೂ ಒಬ್ಬರನ್ನ ಬಿಟ್ಟು ಇನ್ನೊಬ್ಬರು ಮನೆಯಲ್ಲಿ ಇದ್ದವರಲ್ಲ. ಹೀಗಾಗಿ ಕೆಲಗಂಟೆಗಳ ಅಂತರದಲ್ಲಿ ಮೇ 13ರಂದು ಒಬ್ಬ ಹಾಗೂ ಮೇ 14ರಂದು ಇನ್ನೊಬ್ಬ ಸಾವಿನ ಕದ ತಟ್ಟಿದ್ದಾರೆ. ಕೋವಿಡ್ನಿಂದ ಬಳಲುತ್ತಿದ್ದ ಈ ಸಹೋದರರು ಮೊದಲು ಮನೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆ ಆಕ್ಸಿಮೀಟರ್ನ್ನು ಖರೀದಿ ಮಾಡಿ ಮನೆಗೆ ತಂದಿದ್ದಾರೆ. ಅಲ್ಲಿ ಅವರ ಆಕ್ಸಿಜನ್ ಮಟ್ಟ 90ಕ್ಕೆ ಇಳಿಕೆಯಾಗಿರೋದು ಕಂಡುಬಂದಿದೆ. ಈ ವೇಳೆಯಲ್ಲಿ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದಾರೆ. ಮೇ 1ರಂದು ಇವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಮೊದಲ ಪರೀಕ್ಷೆಯಲ್ಲಿ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿತ್ತು . ಕೆಲ ದಿನಗಳ ಬಳಿಕ ನಡೆಸಲಾದ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ವೈದ್ಯರು ಕೋವಿಡ್ ವಾರ್ಡ್ನಿಂದ ಸಾಮಾನ್ಯ ಐಸಿಯುವಿಗೆ ಇವರಿಬ್ಬರನ್ನ ಶಿಫ್ಟ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಇವರ ತಂದೆ ಇನ್ನೊಂದೆರಡು ದಿನ ಮಕ್ಕಳನ್ನ ಕೋವಿಡ್ ವಾರ್ಡ್ನಲ್ಲೇ ಪರೀಕ್ಷೆ ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಮೇ 13ರಂದು ಆಸ್ಪತ್ರೆಯಿಂದ ಬಂದ ಸುದ್ದಿ ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿತು ಎಂದು ಹೇಳುತ್ತಾ ಗ್ರೆಗೋರಿ ಕಣ್ಣೀರಾದ್ರು. ರಾಫ್ರೆಡ್ ಕೊನೆಯ ಬಾರಿಗೆ ತನ್ನ ತಾಯಿಗೆ ಆಸ್ಪತ್ರೆ ಬೆಡ್ನಲ್ಲಿ ಮಲಗಿಯೇ ಕರೆ ಮಾಡಿದ್ದ. ಆತನ ಧ್ವನಿ ನಡುಗುತ್ತಿತ್ತು. ಈ ವೇಳೆ ಆತ ನನ್ನ ಆರೋಗ್ಯ ಸುಧಾರಿಸುತ್ತಿದೆ. ಜೋರ್ಫಡ್ ಹೇಗಿದ್ದಾನೆ ಎಂದು ಕೇಳಿದ್ದನಂತೆ. ಜೋರ್ಫಡ್ ನಿಧನನಾಗಿದ್ದಾನೆ ಎಂಬ ಸುದ್ದಿಯನ್ನ ಹೇಳದ ತಾಯಿ ಆತನನ್ನ ದೆಹಲಿ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದರಂತೆ. ಆದರೆ ರಾರ್ಫಡ್ ಅಮ್ಮನ ಬಳಿ ನನಗೊತ್ತು ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ಹೇಳಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ರಾರ್ಫಡ್ ಕೂಡ ಕೊರೊನಾಗೆ ಬಲಿಯಾಗಿದ್ದಾನೆ.