ನವರಾತ್ರಿ ಹಬ್ಬದ ಪ್ರಯುಕ್ತ ಈಗಾಗಲೇ ಅನೇಕ ಮೂರ್ತಿ ತಯಾರಕರು ಕರೊನಾ ವಿರುದ್ದ ಜಾಗೃತಿ ಸಾರುವ ದುರ್ಗೆಯ ಮೂರ್ತಿಯನ್ನ ತಯಾರಿಸಿದ್ದಾರೆ. ಈ ಸಾಲಿಗೆ ಇದೀಗ ಇನ್ನೊಬ್ಬ ಕಲಾವಿದ ಸೇರಿದ್ದು ಮೆಡಿಕಲ್ ತ್ಯಾಜ್ಯಗಳನ್ನ ಬಳಸಿ ದುರ್ಗೆಯನ್ನ ರಚಿಸಿದ್ದಾರೆ.
ಅಸ್ಸಾಂ ಮೂಲದ ಕಲಾವಿದ ಸಂಜೀಬ್ ಬಸಾಕ್ ಎಂಬವರು ಮಾತ್ರೆ ಹಾಗೂ ಸಿರೀಂಜ್ಗಳನ್ನ ಬಳಸಿ 60 ದಿನಗಳ ಕಾಲ ಪರಿಶ್ರಮ ಪಟ್ಟು ಈ ಮೂರ್ತಿಯನ್ನ ನಿರ್ಮಾಣ ಮಾಡಿದ್ದಾರೆ. ಬಸಾಕ್ ಕಳೆದ 8 ವರ್ಷಗಳಿಂದ ಈ ರೀತಿ ತ್ಯಾಜ್ಯ ಪದಾರ್ಥಗಳನ್ನ ಬಳಸಿ ದುರ್ಗೆಯ ಮೂರ್ತಿಯನ್ನ ತಯಾರು ಮಾಡ್ತಾ ಬಂದಿದ್ದಾರೆ. ಈ ಹಿಂದೆ ಬೆಂಕಿ ಕಡ್ಡಿ, ವೈರ್ ಸೇರಿದಂತೆ ವಿವಿಧ ವಸ್ತುಗಳನ್ನ ಬಳಕೆ ಮಾಡ್ತಿದ್ದ ಬಸಾಕ್ ಈ ಬಾರಿ ಮೆಡಿಕಲ್ ತ್ಯಾಜ್ಯಗಳನ್ನ ಬಳಸಿದ್ದಾರೆ.
ಕಳೆದ ವರ್ಷ ಎಲೆಕ್ಟ್ರಿಕಲ್ ವೈರ್ ಬಳಸಿ 166 ಕೆಜಿ ತೂಕದ ದೇವಿಯ ಮೂರ್ತಿ ನಿರ್ಮಾಣ ಮಾಡಿದ್ದ ಬಸಾಕ್ ಹೆಸರನ್ನ ಆಸ್ಸಾಂ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ನಮೂದಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬಸಾಕ್, ಮೂರ್ತಿಯನ್ನ ನಿರ್ಮಾಣ ಮಾಡೋಕೆ ನಾನು ಪ್ರತಿ ವರ್ಷ ಹೊಸ ಐಡಿಯಾಗಳನ್ನ ಹುಡುಕ್ತಾ ಇದ್ದೆ. ಈ ವರ್ಷ ಲಾಕ್ಡೌನ್ ಸಮಯದಲ್ಲಿ ಜನರು ಮೆಡಿಕಲ್ ಮುಂದೆ ಕ್ಯೂ ನಿಂತಿರೋದನ್ನ ನೋಡಿದ್ದೆ. ಎಷ್ಟೋ ಜನ ಔಷಧಿ ಸಿಗದೇ ಪರದಾಡೋದನ್ನೂ ನಾನು ಕಂಡಿದ್ದೆ. ಹೀಗಾಗಿ ಈ ಬಾರಿ ಮೆಡಿಕಲ್ ವೇಸ್ಟೇಜ್ ಬಳಸಿ ಮೂರ್ತಿ ತಯಾರು ಮಾಡೋ ನಿರ್ಧಾರಕ್ಕೆ ಬಂದೆ ಅಂತಾ ಹೇಳಿದ್ರು.