ಕಾಲೇಜು ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗೋವಾ ಟ್ರಿಪ್ಗೆ ಪ್ಲಾನ್ ಮಾಡೋದು ಹೊಸದೇನಲ್ಲ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೋವಾ ಟ್ರಿಪ್ಗೆ ನಿಜವಾಗಿಯೂ ಹೋಗಿ ಬರ್ತಾರೆ.
ಇನ್ನು ಅನೇಕ ಮಂದಿ ಪ್ಲಾನ್ ಮಾಡೋದ್ರಲ್ಲಿಯೇ ತಮ್ಮ ಅರ್ಧ ಆಯುಷ್ಯವನ್ನ ಕಳೆದುಬಿಡ್ತಾರೆ. ಅಲ್ಲಿಗೆ ಗೋವಾ ಟ್ರಿಪ್ ಅನ್ನೋದು ಒಂದು ಕನಸಾಗಿಯೇ ಉಳಿದುಬಿಡುತ್ತೆ.
ಆದರೆ ನಾವು ಈಗ ಹೇಳೋಕೆ ಹೊರಟಿರುವ ಈ ಕತೆಯನ್ನ ಕೇಳಿದ್ರೆ ಮನಸ್ಸು ಮಾಡಿದ್ರೆ ಗೋವಾ ಟ್ರಿಪ್ಗೆ ಯಾವಾಗ ಬೇಕಿದ್ದರು ಹೋಗಬಹುದು ಎಂದು ನಿಮಗೆ ಎನಿಸದೇ ಇರದು.
ಹ್ಯುಮನ್ಸ್ ಆಫ್ ಬಾಂಬೆ, 60 ವರ್ಷ ವಯಸ್ಸಿನ ಮೂವರು ಸ್ನೇಹಿತರ ಫೋಟೋವನ್ನ ಶೇರ್ ಮಾಡಿದೆ.
ಈ ಮೂವರು ಶಾಲೆ ಹಾಗೂ ಕಾಲೇಜು ದಿನದ ಸ್ನೇಹಿತರು. ಈ ಮೂವರು ತಮ್ಮ 68ನೇ ವಯಸ್ಸಿನಲ್ಲಿ ಗೋವಾ ಟ್ರಿಪ್ ಮಾಡೋ ಮೂಲಕ ಯುವಜನತೆಯ ಹುಬ್ಬೇರುವಂತೆ ಮಾಡಿದ್ದಾರೆ. ರಸ್ತೆ ಮಾರ್ಗದ ಮೂಲಕ ನಾಲ್ಕು ದಿನಗಳ ಸಮಯದಲ್ಲಿ ಚಂಡೀಗಢದಿಂದ ಗೋವಾಗೆ ತಲುಪಿದ್ದಾರೆ.
ಮಾರ್ಗ ಮಧ್ಯದಲ್ಲಿ ಈ ಸ್ನೇಹಿತರು ಬೆಂಗಳೂರು, ಚೆನ್ನೈ, ಹಂಪಿ ಸೇರಿದಂತೆ ವಿವಿಧ ಸ್ಥಳಕ್ಕೆ ಭೇಟಿಯನ್ನೂ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೇ ಇವರು ಅಂಡಮಾನ್ಗೆ ಹೋಗಲು ಕ್ಷಣಮಾತ್ರದಲ್ಲಿ ನಿರ್ಧರಿಸಿದ್ದಾರೆ. ಹಾಗೂ ಪೋರ್ಟ್ಬ್ಲೇರ್ಗೆ ಹಾರಿ 9 ದಿನಗಳ ಕಾಲ ಸಖತ್ ಎಂಜಾಯ್ ಮಾಡಿದ್ದಾರೆ.
ಈ ಮೂವರು ಸ್ನೇಹಿತರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ವೃದ್ಧಾಪ್ಯದಲ್ಲೂ ಇಂತಹದ್ದೊಂದು ಭರ್ಜರಿ ಪ್ರವಾಸ ಮಾಡಿದ ಇವರ ಕಾರ್ಯಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ.
https://www.facebook.com/humansofbombay/photos/a.253147214894263/1649341788608125/?type=3