ಬಾಲಿವುಡ್ ದಂತಕತೆ ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ ಮಂಗಳವಾರ ನಿಧನರಾಗಿದ್ದರು. 58 ವರ್ಷದ ರಾಜೀವ್ ಕಪೂರ್ ಅಂತ್ಯಕ್ರಿಯೆಯನ್ನ ಕುಟುಂಬಸ್ಥರು ಹಾಗೂ ಆತ್ಮೀಯರ ಉಪಸ್ಥಿತಿಯಲ್ಲಿ ನಡೆಸಲಾಗಿದೆ.
ರಾಜೀವ್ ಕಪೂರ್ರ ಐವರು ಮಕ್ಕಳಲ್ಲಿ ರಾಜೀವ್ ಕಪೂರ್ ಕಿರಿಯರು. ರಣಧೀರ್ ಕಪೂರ್, ರಿಷಿ ಕಪೂರ್, ರೀತು ನಂದಾ ಹಾಗೂ ರೀಮಾ ಜೈನ್ ರಾಜ್ಕಪೂರ್ರ ಇತರೆ ನಾಲ್ವರು ಮಕ್ಕಳು. ಸೋಶಿಯಲ್ ಮೀಡಿಯಾದಲ್ಲಿ ರಾಜೀವ್ ಕಪೂರ್ ನಿಧನಕ್ಕೆ ಸಂತಾಪ ಸೂಚಿಸಿ ಪೋಸ್ಟ್ಗಳನ್ನ ಹಾಕಿದ್ದು ಒಂದೆಡೆಯಾದ್ರೆ 94 ವರ್ಷದ ವೃದ್ಧರೊಬ್ಬರು ರಾಜೀವ್ ಕಪೂರ್ ಅಂತಿಮ ದರ್ಶನಕ್ಕೆ ಆಗಮಿಸಿದ ಫೋಟೋಗಳು ಕೂಡ ಭಾರೀ ಸದ್ದು ಮಾಡ್ತಿವೆ.
ಈ ವೃದ್ಧನ ಹೆಸರು ವಿಶ್ವ ಮೆಹ್ರಾ ಎಂದಾಗಿದ್ದು ಇವರು ಒಂದು ಕಾಲದಲ್ಲಿ ಆರ್ಕೆ ಸ್ಟುಡಿಯೋದಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರಂತೆ. ಇದನ್ನ ಬಿಟ್ಟು ಕಪೂರ್ ಕುಟುಂಬಸ್ಥರ ಜೊತೆ ಈ ವೃದ್ಧನಿಗೆ ಯಾವುದೇ ಸಂಬಂಧ ಇಲ್ಲ. ಸರಿಯಾಗಿ ನಡೆಯಲು ಆಗದೇ ಇದ್ದರೂ ಕೂಡ ರಾಜೀವ್ ಕಪೂರ್ರ ಅಂತಿಮ ದರ್ಶನ ಪಡೆಯಲು ಕಪೂರ್ ನಿವಾಸಕ್ಕೆ ವಿಶ್ವ ಮೆಹ್ರಾ ಆಗಮಿಸಿದ್ದರು. ಗೇಟ್ ಬಳಿ ನಿಂತು ಅಳುತ್ತಾ ಕಣ್ಣೀರು ಒರೆಸಿಕೊಳ್ತಿದ್ದ ಈ ವೃದ್ಧನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದಿವಂಗತ ರಿಷಿ ಕಪೂರ್ ಪತ್ನಿ ನೀತು ಸಿಂಗ್, ರಾಜೀವ್ ಕಪೂರ್ರ ನಿಧನ ವಾರ್ತೆಯನ್ನ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಲ್ಲಿಯವರೆಗೂ ರಾಜೀವ್ ಕಪೂರ್ರ ನಿಧನಕ್ಕೆ ಕಾರಣವನ್ನ ಕಪೂರ್ ಕುಟುಂಬ ಬಹಿರಂಗಪಡಿಸಿಲ್ಲ. 1983ರಲ್ಲಿ ಎಕ್ ಜಾನ್ ಹೈ ಹಮ್ ಎಂಬ ಸಿನಿಮಾ ಮೂಲಕ ರಾಜೀವ್ ಕಪೂರ್ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. 1985ರಲ್ಲಿ ತೆರೆ ಕಂಡ ತೇರಿ ಗಂಗಾ ಮೈಲಿ ಎಂಬ ಸಿನಿಮಾ ರಾಜೀವ್ ಕಪೂರ್ಗೆ ಹೆಸರು ತಂದುಕೊಟ್ಟ ಸಿನಿಮಾ. ಇದಾದ ಬಳಿಕ ಆಕಾಶ್, ಲವರ್ ಬಾಯ್, ಜಬರ್ದಸ್ತ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ ರಾಜೀವ್ ಕಪೂರ್ ಬಳಿಕ ಚಿತ್ರ ನಿರ್ಮಾಣದತ್ತ ವಾಲಿದ್ರು.