ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದ ಹೊಸ ಶಿಕ್ಷಣ ನೀತಿಯ ಬಗ್ಗೆ ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭವಾಗಿದೆ. ಹೊಸ ನೀತಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಅದರ ಬಗ್ಗೆ ಕೆಲವರು ಪ್ರಶ್ನೆ ಎತ್ತಿದ್ದಾರೆ.
ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಕ್ರಿಯಾಲ್, ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಜಂಟಿ ಸುದ್ದಿಗೋಷ್ಠಿಯಲ್ಲಿ ನೂತನ ಶಿಕ್ಷಣ ನೀತಿಯ ಕುರಿತು ವಿವರ ನೀಡಿದ್ದರು.
ಶಿಕ್ಷಣ ನೀತಿ-2020 ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದೆ. ಬೋರ್ಡ್ ಎಕ್ಸಾಂ ನಿಂದ ಬಿಡುಗಡೆ ನೀಡಿದೆ. 6 ನೇ ತರಗತಿಗೆ ಇಂಟರ್ನ್ ಶಿಪ್ ವ್ಯವಸ್ಥೆ ಜಾರಿಗೆ ತಂದಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಒತ್ತು ನೀಡಲಾಗಿದೆ. ಕನಿಷ್ಠ 5 ನೇ ತರಗತಿಯವರೆಗೆ ಕಲಿಸುವ ಮಾಧ್ಯಮ ಮಾತೃಭಾಷೆಯೇ ಆಗಿರಬೆಕು. 8 ನೇ ತರಗತಿಯವರೆಗೂ ಮನೆಯ ಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆಗೆ ಒತ್ತು ನೀಡಬೇಕು ಎಂದು ಸೂಚಿಸಲಾಗಿದೆ.
ನಂತರವೂ ಅದನ್ನು ಒಂದು ಭಾಷೆಯಾಗಿ ಕಲಿಯಬಹುದು ಮತ್ತು ಯಾವ ಸಂದರ್ಭದಲ್ಲಿ ಸಾಧ್ಯವೋ ಆಗೆಲ್ಲ ಸ್ಥಳೀಯ ಭಾಷೆಯನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ. ಮಕ್ಕಳು ಕಷ್ಟದ ವಿಷಯಗಳನ್ನು ಮಾತೃಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು. ಆದರೆ, ಹೊಸ ನೀತಿ ಮನೆಯಲ್ಲಿ ಎರಡು ಭಾಷೆಯನ್ನಾಡುವ ಪಾಲಕರಿದ್ದಲ್ಲಿ ಅಥವಾ ಇಂಗ್ಲಿಷ್ ನಲ್ಲಿ ಪ್ರಾವೀಣ್ಯತೆ ಹೊಂದಿದ ಪಾಲಕರಿದ್ದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ.
ಇದರಿಂದ ಹೊಸ ಶಿಕ್ಷಣ ನೀತಿಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವ ಮತ್ತು ಬರೆಯುವುದರಲ್ಲಿ ಚುರುಕಾಗಿದ್ದಾರೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವರಿಗೆ ಅನುಕೂಲವಾಗುತ್ತಿತ್ತು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. “ನಾನೊಬ್ಬ ಬಂಗಾಳಿ, ನನ್ನ ಪತಿ ಕೇರಳದವರು. ನನ್ನ ಪುತ್ರನಿಗೆ ನಾಲ್ಕು ಭಾಷೆ ಗೊತ್ತಿದೆ. ಆತನ ಮಾತೃಭಾಷೆ ಯಾವುದು” ಎಂದು ಸಂಘಮಿತ್ರ ಮುಜುಂದಾರ್ ಎಂಬುವವರು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.