
ಕೊರೋನಾ ಲಾಕ್ ಡೌನ್ ಪರಿಣಾಮ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳೂ ಅದ್ಧೂರಿಯಾಗಿ ನಡೆಯುತ್ತಿಲ್ಲ. ಎಲ್ಲವೂ ಸರಳೀಕರಣಗೊಂಡಿದೆ.
ಇದರಿಂದ ಬ್ಯಾಂಡ್ ವಾದಕರಿಗೆ ಬೇಡಿಕೆ ಕಡಿಮೆಯಾಗಿದ್ದು, ಇದನ್ನೇ ನೆಚ್ಚಿಕೊಂಡಿದ್ದ ಬ್ಯಾಂಡ್ ವಾದಕರು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ಬಂದಿದೆ.
ಆದರೆ, ಇಡೀ ಉತ್ತರ ಪ್ರದೇಶದ ಪಾಲಿಗೆ ಬಹುದೊಡ್ಡ ತಲೆನೋವಾಗಿರುವ ಮಿಡತೆಗಳು ಅಲ್ಲಿನ ಬ್ಯಾಂಡ್ ವಾದಕರಿಗೆ ಭಾರೀ ಬೇಡಿಕೆ ತಂದುಕೊಟ್ಟಿದೆ.
ಎಲ್ಲೆಲ್ಲೂ ಮಿಡತೆಗಳ ಹಿಂಡು ಕಂಡು ದಂಗಾಗಿರುವ ಜನರು, ಸರ್ಕಾರ ಅವುಗಳನ್ನು ಓಡಿಸಲು ಹರಸಾಹಸಪಡುವಂತಾಗಿದೆ. ಏತನ್ಮಧ್ಯೆ, ಕೆಲಸ ಇಲ್ಲದೆ ಖಾಲಿ ಕುಳಿತಿದ್ದ ಬ್ಯಾಂಡ್ ವಾದಕರನ್ನು ಬಳಸಿಕೊಳ್ಳಲು ಸ್ಥಳೀಯರು ನಿರ್ಧರಿಸಿದ್ದು, ಶಬ್ದ ಮಾಡಿ ಮಿಡತೆಗಳನ್ನ ಓಡಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ತಕ್ಕ ಮಟ್ಟಿಗೆ ಇದು ಯಶಸ್ವಿಯಾಗುತ್ತಿದ್ದು, ಬ್ಯಾಂಡ್ ವಾದಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ರೈತರು ತಮ್ಮ ಜಮೀನಿನಲ್ಲಿನ ಬೆಳೆ ಉಳಿಸಿಕೊಳ್ಳಲೂ ಬ್ಯಾಂಡ್ ವಾದಕರ ಮೊರೆ ಹೋಗಿದ್ದು, ಹಳ್ಳಿಗಳಲ್ಲಿ ಉಳಿದುಕೊಂಡು ರಾತ್ರಿ ವೇಳೆ ಬ್ಯಾಂಡ್ ಬಾರಿಸುವುದಕ್ಕೆ 7 ರಿಂದ 12 ಸಾವಿರ ರೂ.ವರೆಗೆ ಪಡೆಯುತ್ತಿದ್ದೇವೆ ಎನ್ನುತ್ತಾರೆ ಖಾನ್ಪುರದ ಗೋಲ್ಡನ್ ಬ್ರಾಸ್ ಬ್ಯಾಂಡ್ ನ ಗೋಪಿ.