ಗುರುಗ್ರಾಮದಲ್ಲಿ ಸತತ ಮೂರು ರಾತ್ರಿಗಳಲ್ಲಿ ಮೂವರನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಯುವಕನನ್ನ ಬಂಧಿಸಲಾಗಿದೆ. ಆರೋಪಿಯನ್ನ ಬಿಹಾರದ ನಿವಾಸಿ ಮೊಹಮ್ಮದ್ ರಾಜಿ ಎಂದು ಗುರುತಿಸಲಾಗಿದೆ.
ನವೆಂಬರ್ 23, 24 ಹಾಗೂ 25ರಂದು ತಾನು ಮೂವರನ್ನ ಕೊಂದಿದ್ದೇನೆ ಅಂತಾ ರಾಜಿ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ. ಬಾಲ್ಯದಿಂದಲೂ ಎಲ್ಲರೂ ನನ್ನನ್ನ ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದರು. ಹೀಗಾಗಿ ತಾನು ಮನಸ್ಸು ಮಾಡಿದ್ರೆ ಏನ್ ಬೇಕಿದ್ದರೂ ಮಾಡಬಲ್ಲೆ ಅನ್ನೋದನ್ನ ಜಗತ್ತಿಗೆ ತೋರಿಸುವ ಸಲುವಾಗಿ ಅಪರಿಚಿತರನ್ನ ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈತ ಮೊದಲು ಅಪರಿಚಿತರಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಬಳಿಕ ಇರಿದಿದ್ದಾನೆ ಎಂದು ಹೇಳಿದ್ದಾರೆ.
ನವೆಂಬರ್ 23ರ ರಾತ್ರಿ ಗುರುಗ್ರಾಮದ ಲೀಜರ್ ವ್ಯಾಲಿ ಪಾರ್ಕ್ನಲ್ಲಿ ವ್ಯಕ್ತಿಯನ್ನ ಇರಿದು ಕೊಲೆ ಹಾಗೂ ಮಾರನೇ ದಿನ ರಾತ್ರಿ ಸೆಕ್ಟರ್ 40ರಲ್ಲಿ ಭದ್ರತಾ ಸಿಬ್ಬಂದಿ ಹತ್ಯೆ ಮತ್ತು ನವೆಂಬರ್ 25ರಂದು 26 ವರ್ಷದ ರಾಕೇಶ್ ಕುಮಾರ್ ಎಂಬವರನ್ನ ಇರಿದು ಕೊಂದಿದ್ದಾನೆ ಎನ್ನಲಾಗಿದೆ.