ಸ್ಕ್ಯಾನಿಯಾ ಕಂಪನಿಯ ಜೊತೆಗಿನ ಭ್ರಷ್ಟಾಚಾರದ ಆರೋಪ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ವರದಿ ಬಿತ್ತರಿಸಿದ್ದ ಸ್ವೀಡಿಷ್ ಮಾಧ್ಯಮಗಳಾದ ಎಸ್ವಿಟಿ ಹಾಗೂ ಝೆಡ್ಡಿಎಫ್ ವಿರುದ್ಧ ಗಡ್ಕರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
2016ರಲ್ಲಿ ನಿತಿನ್ ಗಡ್ಕರಿ ಮಗಳ ಮದುವೆ ಸಮಾರಂಭದ ವೇಳೆ ಟ್ರಕ್ ಹಾಗೂ ಬಸ್ ತಯಾರಕ ಕಂಪನಿಯಾದ ಸ್ಕ್ಯಾನಿಯಾದಿಂದ ಗಡ್ಕರಿ ಬಸ್ ಖರೀದಿ ಮಾಡಿದ್ದಾರೆ. ಆದರೆ ಈ ಸಂಬಂಧ ಬಿಲ್ ಪಾವತಿ ಮಾಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಬಿತ್ತರಿಸಿತ್ತು.
ಆದರೆ ಸ್ವೀಡಿಷ್ ಮಾಧ್ಯಮಗಳ ಈ ಆರೋಪವನ್ನ ತಳ್ಳಿ ಹಾಕಿರುವ ಗಡ್ಕರಿ ಕಚೇರಿ ಈ ಸಂಬಂಧ ಸ್ಪಷ್ಟನೆಯನ್ನ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಅವರ ಕುಟುಂಬಸ್ಥರ ಮೇಲೆ ಸ್ವೀಡಿಷ್ ಮಾಧ್ಯಮಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸ್ಕ್ಯಾನಿಯಾ ಬಸ್ ಪ್ರಕರಣ ಸ್ವೀಡಿಷ್ಗೆ ಸೇರಿದ್ದಾಗಿದೆ. ಈ ಪ್ರಕರಣದಲ್ಲಿ ಗಡ್ಕರಿ ಹಾಗೂ ಕುಟುಂಬಸ್ಥರನ್ನ ಸೇರಿಸಿರೋದು ಆಧಾರ ರಹಿತ ಆರೋಪವಾಗಿದೆ ಎಂದು ಹೇಳಿದೆ.