
ಲಸಿಕೆ ಹಂಚಿಕೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ಜನತೆ ಕೊರೊನಾಗೆ ಲಸಿಕೆ ಯಾವಾಗ ಲಭ್ಯವಾಗುತ್ತೆ ಎಂದು ಕೇಳುತ್ತಿದ್ದರು. ಆದರೆ ಈಗ ಲಸಿಕೆ ದೇಶದಲ್ಲಿ ಲಭ್ಯವಿದೆ. ಈ ಸಂದರ್ಭದಲ್ಲಿ ನಾನು ದೇಶದ ಜನತೆಗೆ ಶುಭಾಶಯ ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ರು.
ಯಾವುದೇ ಲಸಿಕೆಗಳನ್ನ ಕಂಡು ಹಿಡಿಯಬೇಕು ಅಂದರೆ ಹಲವಾರು ವರ್ಷಗಳೇ ಹಿಡಿಯುತ್ತೆ. ಆದರೆ ಇಡೀ ವಿಶ್ವದ ಇತಿಹಾಸದಲ್ಲೇ ಕೊರೊನಾಗೆ ಬಹಳ ಕಡಿಮೆ ಅವಧಿಯಲ್ಲಿ ಲಸಿಕೆಯನ್ನ ಅಭಿವೃದ್ಧಿ ಪಡಿಸಲಾಗಿದೆ. ನಾವು ಮೊದಲ ಹಂತದಲ್ಲಿ 3 ಕೋಟಿ ಜನಸಂಖ್ಯೆಯನ್ನ ಪೂರೈಸುವ ಗುರಿ ಹೊಂದಿದ್ದೇವೆ. ಎರಡನೇ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಹೇಳಿದ್ರು.
ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನ ಅರ್ಪಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಕೊರೊನಾ ವಾರಿಯರ್ಸ್ ಕುಟುಂಬಸ್ಥರಿಂದ ದೂರ ಇದ್ದು ಕರ್ತವ್ಯ ನಿರ್ವಹಿಸ್ತಾ ಇದ್ದಾರೆ. ಪ್ರೀತಿ ಪಾತ್ರರಿಂದ ದೂರವಿದ್ದು ಜೀವದ ಹಂಗು ತೊರೆದು ಸೇವೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಈ ಲಸಿಕೆಯನ್ನ ನೀಡುತ್ತಿದ್ದೇವೆ ಎಂದು ಹೇಳಿದ್ರು.
ಇನ್ನು ಇಡೀ ದೇಶದಲ್ಲಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಮೊದಲ ಕೊರೊನಾ ಲಸಿಕೆ ನೀಡಲಾಯ್ತು. ಮನೀಶ್ ಕುಮಾರ್ ಎಂಬ ಪೌರ ಕಾರ್ಮಿಕನಿಗೆ ಸೇರಂ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.
ಮನೀಷ್ಗೆ ವೈದ್ಯರು ಕೊರೊನಾ ಲಸಿಕೆ ನೀಡುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು.